ಚೆನ್ನೈ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರತಿ ವರ್ಷ ನಿಗಧಿತ ಪ್ರಮಾಣದಲ್ಲಿ ಕಾವೇರಿ ನೀರು ಹರಿಸಿದರೂ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳುನಾಡಿನ ಹೊಸ ಸರ್ಕಾರ ತಗಾದೆ ತೆಗೆದಿದೆ. ಕರ್ನಾಟಕ, ತಮಿಳುನಾಡಿನ ನೀರಿನ ಪಾಲು ಹರಿಸುತ್ತಿಲ್ಲ. ಅದರ ಬದಲಿಗೆ ಕೇವಲ ಹೆಚ್ಚುವರಿ ನೀರನ್ನು ಮಾತ್ರ ಹರಿಸಲಾಗುತ್ತಿದೆ ಎಂದು ಆರೋಪಿಸಿದೆ.
ತಮಿಳುನಾಡಿನಲ್ಲಿ ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಿದರು. ರಾಜ್ಯಪಾಲರ ಭಾಷಣದಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು ಸರ್ಕಾರದ ಈ ಆರೋಪ ಸೇರಿತ್ತು.
ತಮಿಳುನಾಡಿಗೆ ಅನಾದಿ ಕಾಲದಿಂದಲೂ ಕಾವೇರಿ ನೀರನ್ನು ಬಳಸುವ ಹಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಹಕ್ಕು ಎತ್ತಿಹಿಡಿಯಲ್ಪಟ್ಟ ನಂತರವೂ ನೀರನ್ನು ಪಡೆಯಲು ಪ್ರತಿ ವರ್ಷವೂ ಹೋರಾಟ ನಡೆಸುತ್ತಿದ್ದೇವೆ. ಕರ್ನಾಟಕ ಸರ್ಕಾರವು ನಮಗೆ ಸಿಗಬೇಕಾದ ನೀರನ್ನು ನೀಡುವ ಬದಲು, ಹೆಚ್ಚುವರಿ ನೀರನ್ನು ಮಾತ್ರ ತಮಿಳುನಾಡಿಗೆ ಬಿಡುಗಡೆ ಮಾಡುತ್ತಿದೆ.
ಈ ಪರಿಸ್ಥಿತಿಯಲ್ಲಿ, ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆ ಜಾರಿಗೆ ಬಂದರೆ, ಕೃಷಿ ಉತ್ಪಾದನೆಯ ಜೊತೆಗೆ ರೈತರ ಜೀವನೋಪಾಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಇದನ್ನು ನಿಲ್ಲಿಸಲು ಮತ್ತು ಸರಿಯಾದ ಸಮಯದಲ್ಲಿ ತಮಿಳುನಾಡಿಗೆ ನೀರು ಒದಗಿಸಲು ಸರ್ಕಾರ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಿದೆ.




