ಬಾಗಲಕೋಟೆ : ಇತ್ತೀಚಿಗೆ ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು ಪ್ರತಿಯೊಬ್ಬರು ಅವುಗಳನ್ನು ಮೈಗೂಡಿಸಿಕೊಂಡು ದುಡಿದಾಗ ಉಳಿಸಿ ಬೆಳಸಲು, ಮುಂದಿನ ತಲೆಮಾರುಗಳಿಗೆ ಕೊಂಡೊಯ್ಯಲು ಸಾಧ್ಯ ಎಂದು ನರಗುಂದದ ಎಸ್.ಎಫ್.ಜಿ. ಎಫ್. ಜಿ.ಎಸ್ ದೈಹಿಕ ನಿರ್ದೇಶಕ ಡಾ. ದುಂಡಪ್ಪ.ಎಸ್. ದೊಡಮನಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳಿಂದ ದತ್ತು ಗ್ರಾಮವಾದ ಯಡಹಳ್ಳಿಯ ಶ್ರೀ ಗುರು ಅಜಾತ ನಾಗಲಿಂಗೇಶ್ವರ ಸಾಧುಮಠದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರೀಡೆಗಳ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದ ಅವರು ಕಬ್ಬಡ್ಡಿ, ಕುಸ್ತಿ, ಮಲ್ಲಗಂಬ, ಹುಸಿಗುಂಡು ಎತ್ತುವುದು ಗ್ರಾಮೀಣ ಕ್ರೀಡೆಗಳಾಗಿದ್ದವು. ಇಂದು ಜನರ ಮನಸ್ಥಿತಿ ಬದಲಾಗಿವೆ, ಹೊರತು ಕ್ರೀಡೆಗಳಲ್ಲ. ಶರೀರಕ್ಕೆ ದನಿಯದೆ ಉಲ್ಲಾಸ ಬರಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ರೀಡೆಗಳನ್ನು ಮೊಬೈಲ್ ಅಲ್ಲಿ ಆಡುತ್ತಿರುವುದು ವಿಷಾದನೀಯ.
ಬೆವರನ್ನು ಸುರಿಸಿದಾಗ ಮಾತ್ರ ಕ್ರಿಯಾತ್ಮಕವಾಗಿರಲು ಸಾಧ್ಯ. ಮಾತ್ರೆಗಳು ಕೇವಲ ಆಯಾಸವನ್ನು ಕಡಿಮೆ ಮಾಡುತ್ತವೆ. ದಿನನಿತ್ಯದ ಕ್ರೀಡೆಗಳನ್ನು ಚಾಚುತಪ್ಪದೇ ಆಡುವುದರಿಂದ ಆರೋಗ್ಯ ಸದೃಢವಾಗಿತ್ತದೆ. ಹಳ್ಳಿಯಲ್ಲಿ ಬೆಳೆದ ತರಕಾರಿಯನ್ನು ಖರೀದಿಸಿದರೆ ಉತ್ತಮ ಆರೋಗ್ಯ. ಆಟದ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೆ ಅಭಿವೃದ್ಧಿ ಕಡೆಗೆ ಸಾಗಬೇಕು.
ಪ್ರಸ್ತುತದಲ್ಲಿ ನಗರದ ಜನರು ಗ್ರಾಮೀಣ ಕ್ರೀಡೆಗಳತ್ತ ಒಲವು ಹರಿಸುತ್ತಿದ್ದಾರೆ. ಮಣ್ಣಿನಲ್ಲಿ ಹೆಚ್ಚಿನ ಸಮಯ ಕಳೆದರೆ ಮನಸ್ಸು ಶಾಂತವಾಗುತ್ತದೆ. ನಾವು ನಕ್ಕಾಗ ಮನಸ್ಸು ನಗುತ್ತದೆ. ಪಠ್ಯ ಚಟುವಟಿಕೆಯ ಜೊತೆಗೆ ಕ್ರೀಡೆಯು ಮುಖ್ಯ ಎಂದರು.
ಯಡಹಳ್ಳಿಯ ಹಿರಿಯ ಪತ್ರಕರ್ತ ಶಂಕರಲಿಂಗ ದೇಸಾಯಿ ಅವರು ಮಠದ ಇತಿಹಾಸ ಮತ್ತು ಗ್ರಾಮೀಣ ಕ್ರೀಡೆಗಳ ಪ್ರಸ್ತುತತೆ ಕುರಿತು ಮಾತನಾಡಿ ಮನುಷ್ಯನು ಸಂಘಜೀವಿ. ಶಿಕ್ಷಣದಲ್ಲಿ ಸಾಮಾನ್ಯಜ್ಞಾನ ಹೆಚ್ಚಿಸಲು ಎನ್ಎಸ್ಎಸ್ ಮತ್ತು ಎನ್ ಸಿಸಿಯನ್ನು ಏರ್ಪಡಿಸಲಾಗಿದೆ. ಪ್ರಚಲಿತ ಕೆಲವು ಕ್ರೀಡೆ ಅಳಿವಿನ ಅಂಚಿನಲ್ಲಿವೆ. ಕ್ರೀಡೆಯ ಸೇವೆಯಿಂದ ಸದೃಢ ವಿಚಾರ ಬರುತ್ತವೆ. ಶರೀರ ಮಾನಸಿಕವಾಗಿ ಬಲಿಷ್ಠವಾಗುತ್ತದೆ . ಹಿಂದಿನ ಕಾಲದ ಕ್ರೀಡೆಗಳನ್ನು ಪುಸ್ತಕ ಮತ್ತು ಚಿತ್ರಗಳಲ್ಲಿ ಕಾಣುವಂತಾಗಿದೆ.
ಗುರು ಅಜಾತ ನಾಗಲಿಂಗೇಶ್ವರ ಸಾಧುಮಠ 230 ವರ್ಷಗಳ ಇತಿಹಾಸ ಹೊಂದಿದೆ . ಇಲ್ಲಿ ಮಠವಾಗುತ್ತದೆ ಎಂದು ಮೊದಲೇ ಭವಿಷ್ಯ ನುಡಿದಿದ್ದರಂತೆ. ಭಾವೈಕ್ಯತೆಯ ಮಠ ಇದಾಗಿದ್ದು ಮೂವರು ಮುಸ್ಲಿಂರು ನಿರ್ಮಿಸಿದ್ದಾರೆಂದು ಪ್ರತೀತಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಲ್.ಎಸ್.ಚವಡಿ ಅವರು ಮಾತನಾಡಿ ಹೊಸ ಪರಿಸರದಲ್ಲಿ ಜೀವಿಸುತ್ತಿದ್ದೀರಿ. ಇಂದಿನ ಯುವಕರು ಮೊಬೈಲ್ ನೋಡುವುದರಿಂದ ಆಯಾಸಗೊಳ್ಳುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳ ಪರಿಚಯವಿಲ್ಲ. ಮೈದಾನವೇ ಸಿಗದ ಪರಿಸ್ಥಿತಿ ಉಲ್ಬನಗೊಂಡಿದೆ. ಗ್ರಾಮೀಣ ಭಾಗದಲ್ಲಿ ಜಾತ್ರೆಯಲ್ಲಿ ವಿಭಿನ್ನ ಕ್ರೀಡೆಗಳನ್ನು ಏರ್ಪಡಿಸುತ್ತಿದ್ದರು. ಕ್ರೀಡೆಯಿಂದ ದೈಹಿಕ ಸದೃಢತೆ ಸಾಧ್ಯ. ಶಿಸ್ತಿನ ಪಾಠ, ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳಿ. ಜೊತೆಗೆ ನಮ್ಮ ಮಹಾವಿದ್ಯಾಲಯದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ 13 ಜನ ವಿದ್ಯಾರ್ಥಿಗಳು ಬ್ಲ್ಯೂ ಆಗಿರುವುದು ಹೆಮ್ಮೆ ಎಂದರು.
ಶಿಲ್ಪಿ ಗಣಪತಿ ನದಾಫ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಎಸ್.ಎಮ್.ಗೌಡರ, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಜ್ಯೋತಿ. ಎನ್.ದಿವಟೆ, ಎನ್ಎಸ್ಎಸ್ ಘಟಕ 2 ಅಧಿಕಾರಿ ಡಾ. ವಿರುಪಾಕ್ಷಿ.ಎನ್.ಬಿ ಸೇರಿದಂತೆ ಬೋಧಕ - ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



