ಕಾಂಗ್ರೆಸ್ ಮಾಡಿದ ಅಭಿವೃದ್ಧಿಯಿಂದ ಇಂದು ಭಾರತ ವಿಶ್ವಗುರು ಆಗಿದೆ - ಸತೀಶ್ ಜಾರಕಿಹೊಳಿ

Mar 26, 2024 - 16:37
 38
Google  News Join WhatsApp Join Telegram Live

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯಿಂದ ಇಂದು ಭಾರತ ವಿಶ್ವಗುರು ಆಗಿದೆ - ಸತೀಶ್ ಜಾರಕಿಹೊಳಿ

Panchayat Swaraj Samachar News Desk.

ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸುವ ಸಂದೇಶ ನಮಗೆ ಬಂದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಇಂದು ನಡೆದ ಬೆಳಗಾವಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಆಂತರಿಕ ಸಮೀಕ್ಷೆ ನಡೆಸಿದೆ. ಎರಡೂ ಕಡೆ ಹೆಚ್ಚಿನ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಭರವಸೆ ಮೂಡಿದೆ. ಕಳೆದ 50 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದೇವೆ. ಜನರ ಜೀವನ ಮಟ್ಟ ಎತ್ತರಿಸಿದ್ದೇವೆ. ಈಗ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. 10 ವರ್ಷಗಳ ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.  

ಬಿಜೆಪಿಯವರು ನೀಡಿದ್ದ ಒಂದೇ ಒಂದು ಭರವಸೆ ಈಡೇರಿಸಿಲ್ಲ. ಬುಲೆಟ್ ಟ್ರೇನ್, ರೈತರ ಆದಾಯ ದ್ವಿಗುಣ, ಪ್ರತಿಯೊಬ್ಬರಿಗೆ 15 ಲಕ್ಷ ರೂ. ಸ್ವಿಸ್ ಬ್ಯಾಂಕ್ ನಿಂದ ಹಣ ವಾಪಸ್ಸು ತರುವುದು ಸೇರಿ ಅನೇಕ ಭರವಸೆ ಕೊಟ್ಟಿದ್ದರು. ಆದರೆ, ಏನೂ ಮಾಡಿಲ್ಲ. ಮಹಿಳೆಯರು, ಬಡವರು, ಎಸ್ಸಿ, ಎಸ್ಟಿಗಳಿಗೆ ಏನು ಮಾಡಿದ್ದಾರೆ? ಪುಷ್ಪಕ ವಿಮಾನ ಕಥೆ ಅಷ್ಟೇ ಹೇಳಿದ್ದಾರೆ. ಜಲಾಶಯ, ಇಸ್ರೋ, ವಿಶ್ವವಿದ್ಯಾಲಯ, ಐಐಟಿ ಸೇರಿ ಅನೇಕ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಮಾಡಿದ ಅಭಿವೃದ್ಧಿಯಿಂದ ಇಂದು ಭಾರತ ವಿಶ್ವಗುರು ಆಗಿದೆ. ಮೃಣಾಲ್ ಭವಿಷ್ಯದ ನಾಯಕ. ಮುಂದೆ ಪಕ್ಷ ಮತ್ತು ಜಿಲ್ಲೆಗೆ ದೊಡ್ಡ ಆಸ್ತಿಯಾಗಲಿದ್ದಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದರು.

ಮೃಣಾಲ್ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮ ಭವಿಷ್ಯವನ್ನು ತ್ಯಾಗ ಮಾಡಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಎಂಪಿ ಆಗುವ ಅವಶ್ಯಕತೆ ಇರಲಿಲ್ಲ. ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಆರಾಮವಾಗಿ ಇರಬಹುದಿತ್ತು. ಆದರೆ, ನಮ್ಮ ಒತ್ತಾಯಕ್ಕೆ ಜನರ ಸೇವೆ ಮಾಡಲು ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಒಂದಿಷ್ಟು ಜನರು ಇವ್ರು ಸಣ್ಣವರು ಎನ್ನುತ್ತಿದ್ದಾರೆ. ಈಗ ಸಣ್ಣವರೇ ಮುಂದೆ ದೊಡ್ಡವರಾಗುತ್ತಾರೆ. ರಾಜಕೀಯ ಹೊಸದಾಗಿ ಇರಬಹುದು. ಆದರೆ, ನಾಲ್ಕೈದು ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದಾರೆ.‌ ಕೊರೊನಾ, ಪ್ರವಾಹ ಸಂದರ್ಭದಲ್ಲಿ ಜನರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಜಾರಕಿಹೊಳಿ ಹೇಳಿದರು. 

ದೇಶದಲ್ಲಿ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರ ನಡೆದಿದೆ. ಜನ‌ ಮನಸ್ಸು ಮಾಡಿದರೆ ಯಾವ ಬದಲಾವಣೆ ಬೇಕಾದರೂ ಆಗುತ್ತದೆ. ಮೃಣಾಲ್, ಪ್ರಿಯಾಂಕಾ ಎಂಪಿ‌ ಆಗುವುದರಲ್ಲಿ ಸಂಶಯವೇ ಇಲ್ಲ. ಚಿಕ್ಕ ವಯಸ್ಸಿನ ಸಂಸದರನ್ನು ಸಂಸತ್ತಿಗೆ ಕಳಿಸಿ ಕೊಟ್ಟ ಶ್ರೇಯ ಬೆಳಗಾವಿ ಮತ್ತು ಚಿಕ್ಕೋಡಿಗೆ ಸಲ್ಲಲಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

Google News Join Facebook Live 24/7 Help Desk

Tags: