ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ, ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಸಹ-ಆರೋಪಿ ವಿನೋದ್ ತೋಮರ್ ಅವರನ್ನು ದೆಹಲಿ ಕೋರ್ಟ್ ಖುಲಾಸೆಗೊಳಿಸಿದೆ.
ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಹಾರಹಾಕಿ ಸಂಭ್ರಮಿಸಿದ್ದಾರೆ. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ನನ್ನ ವಿರುದ್ಧ ಆರೋಪ ಹೊರಿಸಲಾದ ದಿನ, ಆರೋಪ ಸಾಬೀತಾದರೆ, ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಇಂದು, ನ್ಯಾಯಾಲಯವು ನನ್ನನ್ನು ಖುಲಾಸೆಗೊಳಿಸಿದೆ. ʻಗೌರವಾನ್ವಿತವಾಗಿ ಖುಲಾಸೆಗೊಳಿಸಲಾಗಿದೆ’ ಎಂಬ ಪದವನ್ನು ಕೋರ್ಟ್ ಬಳಸಿದೆ ಎಂದು ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ 6 ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡಿದ್ದರು. ಜು.2 ರಂದು ರೋಸ್ ಅವೆನ್ಯೂ ನ್ಯಾಯಾಲಯ ( Rouse Avenue Court) ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ, ಆಗಸ್ಟ್ 3ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ತೀರ್ಪು ಹೊರಬಿದ್ದಿದೆ.
ಸಿಂಗ್ ವಿರುದ್ಧ ಜಂತರ್ ಮಂತರ್‌ನಲ್ಲಿ ಮಹಿಳಾ ಕುಸ್ತಿಪಟುಗಳು ಭಾರೀ ಪ್ರತಿಭಟನೆ ನಡೆಸಿದ್ದರು. ನಂತರ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಜೂನ್ 2023 ರಲ್ಲಿ 1500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಈ ಆರೋಪ ಕೇಳಿಬಂದ ಬೆನ್ನಲ್ಲೇ 2024 ರಲ್ಲಿ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರಕ್ಕೆ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಬದಲಿಗೆ ಅವರ ಮಗ ಕರಣ್ ಭೂಷಣ್ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿತ್ತು.

