ಲಕ್ನೋ: ಪತಿಯಿಂದ ವಿಚ್ಛೇದನ ಪಡೆದ ಬಳಿಕ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿ ಮನೋವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಘಟನೆ ನಡೆದಿದೆ.
40 ವರ್ಷದ ಮನೋವೈದ್ಯೆ ಡಾ. ಹೆಮಿಕಾ ಅಗರ್ವಾಲ್ ಮೃತ ದುರ್ದೈವಿ. ಡಿವೋರ್ಸ್ ಪಡೆದ ಬಳಿಕ ಖಿನ್ನತೆಗೆ ಒಳಗಾಗಿದ್ದ ಅವರು ತಮ್ಮ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯಿಂದ ದೂರವಾಗಿದ್ದಕ್ಕೆ ಮನನೊಂದು ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.
ಭಾನುವಾರ ರಾಜ್ ನಗರ ಎಕ್ಸ್‌ಟೆನ್ಷನ್‌ನಲ್ಲಿರುವ ಆಫೀಸರ್ಸ್ ಸಿಟಿ-2 ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಡಾ. ಹೆಮಿಕಾ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಮಹಿಕಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಸುಮಾರು ಒಂದೂವರೆ ವರ್ಷದ ಹಿಂದೆ ವಿಚ್ಛೇದನವಾಗಿತ್ತು. ಅಂದಿನಿಂದ ಮಹಿಕಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬದವರುತಿಳಿಸಿದ್ದಾರೆ. ಅವರ ತಂದೆ, ಖ್ಯಾತ ಮನೋವೈದ್ಯ ಡಾ. ಆರ್. ಚಂದ್ರ, ಮಗಳು ಕಳೆದ ಹಲವು ತಿಂಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ತಿಳಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಇಲ್ಲಿಯವರೆಗೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿರುವ ಬಗ್ಗೆ ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

