ಕಲಬುರಗಿ: ನನ್ನ ಸಚಿವ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ನಾಯಕರೇ ಅಡ್ಡಿಯಾಗಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಅಂತಾ ಆಳಂದ ಶಾಸಕ ಬಿ.ಆರ್.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಶಾಸಕ ಬಿ.ಆರ್.ಪಾಟೀಲ್, ಅದು ಯಾವ ಲೀಡರ್ ಅಂತಾ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಜಾರಿಕೊಳ್ಳಲು ನೆಪ ಮಾತ್ರಕ್ಕೆ ಈ ರೀತಿ ಹೇಳಿದ್ರಾ? ಸತ್ಯ ಹೇಳಿದ್ರಾ ಅದು ಸಹ ಗೊತ್ತಿಲ್ಲ ಎಂದು ತಿಳಿಸಿದರು.
ನಾನು ಸುಮೋಟೊ ಮಂತ್ರಿ ಮಾಡಿ ಅಂತಾ ಎಲ್ಲೂ ಹೋಗಿಲ್ಲ. ಸಿದ್ದರಾಮಯ್ಯ ಅವರು ಚುನಾವಣೆ ಸಂದರ್ಭದಲ್ಲಿ, ‘ನನ್ನ ಗೆಳೆಯನನ್ನು ಆಯ್ಕೆ ಮಾಡಿ ಕಳುಹಿಸಿ.. ನಾನು ಸಚಿವನನ್ನಾಗಿ ಮಾಡಿ ಕಳುಹಿಸುತ್ತೇನೆ’ ಅಂತಾ ಜನತೆಗೆ ಹೇಳಿದ್ದರು. ನನಗೆ ಬೇಜಾರ್ ಆಗಿದ್ದು ಏನಂದ್ರೆ, ಮಾತು ಕೊಟ್ಟು ಮಾತು ತಪ್ಪಿದ್ರು ಸಿದ್ದರಾಮಯ್ಯ. ಮೂರು ಬಾರಿ ಕರೆದು ಮಂತ್ರಿ ಮಾಡುತ್ತೇನೆ ಅಂತಾ ಹೇಳಿದ್ರು. ಆದರೆ, ಮಾಡಿಲ್ಲ ಎಂದು ಪಾಟೀಲ್ ಅಸಮಾಧಾನ ಹೊರಹಾಕಿದರು.
ಸದ್ಯ 140 ಜನ ಶಾಸಕರು ಇದ್ದಾರೆ. ಅವರು ಕರೆದು ಮಾತಾನಾಡುವ ಸಂದರ್ಭವೇ ಇಲ್ಲ ಎಂದರು. ಇನ್ನು 2028 ರ ಚುನಾವಣೆ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಬಿ.ಆರ್.ಪಾಟೀಲ್, ಕಾದು ನೋಡಿ ಎಂದಷ್ಟೇ ಪ್ರತಿಕ್ರಿಯಿಸಿದರು.

