ಬೆಂಗಳೂರು: ಕಾಂಗ್ರೆಸ್ ಪಕ್ಷವು ಯುವಜನರ ರಕ್ತ ಹೀರಿ ಬದುಕುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಸಿ.ಎನ್. ಅಶ್ವಥ್ ನಾರಾಯಣ ಅವರ ಕಚೇರಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಖಂಡಿಸಿದರು. ಸದಾ ಪೋಸ್ಟರ್ ಚಳವಳಿ ಮಾಡುವುದೇ ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ಜೆನ್ ಜೀ (Gen Z) ಯುವಸಮೂಹ ಈ ದೇಶದ ಭವಿಷ್ಯ. ನಾವು ಯುವಕರ ಪರವಾಗಿ ನಿಲ್ಲುತ್ತೇವೆ ಎಂದರು.
ರಾಜ್ಯದಲ್ಲಿನ ಪರೀಕ್ಷಾ ಅಕ್ರಮಗಳ ಕುರಿತು ಪ್ರಶ್ನಿಸಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ನೀಟ್ ಪರೀಕ್ಷೆಯಲ್ಲಿ ಮಾತ್ರ ಆಗಿದೆಯೇ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲೇಜಿನಲ್ಲಿ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲೂ ಪೇಪರ್ ಸೋರಿಕೆಯಾಗಿದೆ, ಅದಕ್ಕೆ ಸರ್ಕಾರದ ಬಳಿ ಉತ್ತರವಿದೆಯೇ? KPSC ಅಕ್ರಮ ಖಂಡಿಸಿ, ಪಶುವೈದ್ಯರು ಹಾಗೂ ಕೃಷಿ ವಿವಿ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅಕ್ರಮಗಳನ್ನು ಸರ್ಕಾರ ಸಿಬಿಐ ತನಿಖೆಗೆ ಏಕೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆಗೆ ಕಾಂಗ್ರೆಸ್ ತೀವ್ರ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ ನಾರಾಯಣಸ್ವಾಮಿ, ಮುಖ್ಯಮಂತ್ರಿಗಳು ಎರಡು ಬಾರಿ ಹೊರಟ್ಟಿ ಅವರಿಗೆ ಕರೆ ಮಾಡಿ ರಾಜೀನಾಮೆ ಕೇಳಿದ್ದಾರೆ. ನಿನ್ನೆ ತಮ್ಮ ಮನೆಗೆ ಕರೆಸಿಕೊಂಡು ರಾಜೀನಾಮೆಗೆ ಒತ್ತಡ ಹೇರಿದ್ದಾರೆ. ಸಭಾಪತಿಗಳನ್ನು ಮುಖ್ಯಮಂತ್ರಿಗಳು ತಮ್ಮ ಮನೆಗೆ ಕರೆಸಿಕೊಂಡಿದ್ದು ಶಿಷ್ಟಾಚಾರದ ಉಲ್ಲಂಘನೆ. ಸಿಎಂ ಅವರೇ ಸಭಾಪತಿಗಳ ಮನೆಗೆ ಹೋಗಿದ್ದರೆ ಅದು ಸಭ್ಯತೆಯಾಗುತ್ತಿತ್ತು ಎಂದರು.
ಹಿಂದೆ ವಿರೋಧ ಪಕ್ಷದವರು ಸಭಾಪತಿಯಾಗಿದ್ದಾಗ ಅವರನ್ನು ತೆಗೆದುಹಾಕದ ಪರಂಪರೆ ಇತ್ತು. ಆದರೆ ಕಾಂಗ್ರೆಸ್ ಈಗ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ತರುವುದಾಗಿ ಬೆದರಿಸುತ್ತಿದೆ. ಎಐಸಿಸಿ ಲೆಟರ್ ಹೆಡ್‌ನಲ್ಲಿ ಸಭಾಪತಿಗಳ ಹೆಸರು ಉಲ್ಲೇಖಿಸಿ ಕಳುಹಿಸುವ ಮೂಲಕ ಸದನ ಮತ್ತು ಸಂವಿಧಾನಕ್ಕೆ ಅಪಮಾನ ಎಸಗಲಾಗಿದೆ. ಈ ಜವಾಬ್ದಾರಿಯನ್ನು ಹೊತ್ತು ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಸವರಾಜ ಹೊರಟ್ಟಿ ಅವರು ಯಾವುದೇ ಕಾರಣಕ್ಕೂ ಬೆದರಬಾರದು. ನಾವು ನಿಮ್ಮ ಪರವಾಗಿದ್ದೇವೆ. ಧೈರ್ಯವಾಗಿ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಿ, ನಮ್ಮ ಬೆಂಬಲ ನಿಮಗಿದೆ ಎಂದು ಅವರು ಧೈರ್ಯ ತುಂಬಿದರು.

