ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ (PM Modi) ಮೋದಿ ಅವರು ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ನೂತನ (Mysuru) ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು.
ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿಗೆ ಮೈಸೂರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಮಂಡಕಹಳ್ಳಿ ಹೆಲಿಪ್ಯಾಡ್‌ನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದರು.
ರಸ್ತೆ ಬದಿಯಲ್ಲಿ ನಿಂತಿದ್ದ ಅಭಿಮಾನಿಗಳು ಪ್ರಧಾನಿ ಪರ ಘೋಷಣೆಗಳನ್ನು ಕೂಗಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಪ್ರಧಾನಿ ಮೋದಿ ಅವರು ಮೈಸೂರಿನ ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ತೆರಳಿ, ಅಲ್ಲಿ ನಿರ್ಮಾಣಗೊಂಡಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು. ಆಶ್ರಮ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ನಮಿಸಿ ಪೂಜೆ ಸಲ್ಲಿಸಿದರು.
ಸ್ಮಾರಕ ಆವರಣದಲ್ಲಿ ಬಿಲ್ವಪತ್ರೆ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು. ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಥ್ ನೀಡಿದರು. ಆಶ್ರಮದೊಳಗೆ ಕೆಲಕಾಲ ಧ್ಯಾನ ಮಾಡಿದ ಪ್ರಧಾನಿ ಮೋದಿ, ಬಳಿಕ ಅಲ್ಲಿನ ಸ್ವಾಮೀಜಿಗಳು ಮತ್ತು ಆಶ್ರಮದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.

