ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ೧೬ನೇ ಪದವಿ ಪ್ರದಾನ ಸಮಾರಂಭ
ಬಾಗಲಕೋಟೆ: ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ವಿಶ್ವಮಟ್ಟದಲ್ಲಿ ಅಗ್ರಸ್ಥಾನದಲ್ಲಿರುವುದು ಶ್ಲಾಘನೀಯ. ನಾವಿಂದು ತಂತ್ರಜ್ಞಾನದ ಬಳಕೆದಾರರಷ್ಟೇ ಅಲ್ಲದೆ, ವಿಶ್ವಕ್ಕೆ ಡಿಜಿಟಲ್ ತಂತ್ರಜ್ಞಾನದ ಮೂಲಸೌಕರ್ಯಗಳನ್ನು ನಿರ್ಮಿಸಿಕೊಡುವ ಸ್ಥಾನದಲ್ಲಿದ್ದೇವೆ ಎಂದು ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನಿರ್ದೇಶಕ ಪ್ರೊ. ದೆಬಬ್ರತ ದಾಸ್ ಹೇಳಿದರು.
ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಶನಿವಾರ ನಡೆದ ೨೦೨೪–೨೫ನೇ ಸಾಲಿನ ಪದವೀಧರರ ೧೬ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪದವಿ ಪ್ರದಾನ ಮಾಡಿ ಅವರು ಮಾತನಾಡಿದವರು, ಬೆಂಗಳೂರು ಐಐಐಟಿ ಸಂಸ್ಥೆಯ ಸಂಶೋಧನಾ ಉತ್ಪನ್ನಗಳಾದ ಎಂಓಎಸ್‌ಐಪಿ, ಓಪನ್‌ಜಿಟುಪಿ ಹಾಗೂ ಐಎನ್‌ಜಿಐ ಸೇರಿದಂತೆ ವಿವಿಧ ತಾಂತ್ರಿಕ ಕೊಡುಗೆಗಳು ವಿಶ್ವದ ೧೩೦ ಕೋಟಿಗೂ ಅಧಿಕ ಜನರು ಉತ್ತಮ ಜೀವನ ನಡೆಸಲು ನೆರವಾಗಿವೆ. ಇಂತಹ ಸಾಧನೆಗಳು ದೇಶಕ್ಕೆ ಹೆಮ್ಮೆಯ ವಿಷಯವಾಗಿವೆ, ಮಾನವನ ಸಾಮರ್ಥ್ಯವನ್ನು ಮರುಪರಿಶೀಲಿಸುವ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ನಾವಿದ್ದೇವೆ. ಎಐ ತಂತ್ರಜ್ಞಾನವು ಪುನರಾವರ್ತನೆಯಾಗುವ ನಿತ್ಯ ಚಟುವಟಿಕೆಗಳನ್ನು ನಿರ್ವಹಿಸಲು ಹೆಚ್ಚು ಉಪಯುಕ್ತವಾಗಿದೆ. ಆದ್ದರಿಂದ ವೃತ್ತಿಪರರು ಎಐ ಬಗ್ಗೆ ಆತಂಕಗೊಳ್ಳದೆ, ಸೂಕ್ಷ್ಮ ಸಂವೇದನೆ, ಸಾಂದರ್ಭಿಕ ನಿರ್ಣಯ, ಸೂಪ್ತಪ್ರಜ್ಞೆ, ಮೂಲ ಸೃಜನಶೀಲತೆ ಹಾಗೂ ಸಂಸ್ಕಾರಯುತ ಮನಸ್ಸಿನ ಭಾವನೆಗಳೊಂದಿಗೆ ಎಐ ತಂತ್ರಜ್ಞಾನವನ್ನು ಜಾಣ್ಮೆಯಿಂದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ವೃತ್ತಿ ಪರತೆಯೊಂದಿಗೆ ನಿರಂತರ ಕಲಿಕೆ, ಆರೋಗ್ಯ, ಉತ್ತಮ ಮನೋಭಾವದೊಂದಿಗೆ ಸಾಗುವುದು ಮುಖ್ಯ, ಬಾಗಲಕೋಟೆ ಶಿಕ್ಷಣ ಪ್ರೇಮಿಗಳ ನೆಚ್ಚಿನ ತಾಣವಾಗಿದ್ದು, ಇಲ್ಲಿನ ಹಿರಿಯರು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕಾಯಕ, ದಾಸೋಹ ಹಾಗೂ ಸಮಾನತೆ ಈ ನೆಲದ ಜೀವಾಳವಾಗಿವೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಮೂಲದ ಕಲ್ಪತರು ಪ್ರಾಜೆಕ್ಟ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ದಕ್ಷಿಣ ಭಾರತ ಕಾರ್ಯಾಚರಣೆ ವಿಭಾಗದ ವ್ಯವಹಾರ ಮುಖ್ಯಸ್ಥ ಜಿ. ಎಂ. ಶಾಂತಕುಮಾರ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದವರು ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಿ, ಉದ್ಯಮಕ್ಷೇತ್ರ ವಿನೂತನವಾಗಿ, ನಿಖರವಾಗಿ ಯೋಚಿಸುವರನ್ನು ಅಪೇಕ್ಷಿಸುತ್ತದೆ, ವೈಪಲ್ಯವೆನ್ನುವುದು ಯಶಸ್ವಿನ ವಿರುದ್ಧವಲ್ಲ, ಅದು ಯಶಸ್ವಿನ ಭಾಗ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಅವರು ಈ ಕಾರ್ಯಕ್ರಮ ಪದವಿ ಪ್ರದಾನ ಸಮಾರಂಭ ಅಷ್ಟೇ ಅಲ್ಲ, ನಿಮ್ಮ ಶಿಸ್ತು, ಪರಿಶ್ರಮ, ಜ್ಞಾನದ ಸಂಭ್ರಮಾಚರಣೆ, ಕಾಲೇಜು ಉತ್ತಮ ಶಿಕ್ಷಣದೊಂದಿಗೆ ಉತ್ತಮ ಮೌಲ್ಯಗಳನ್ನು ನೀಡುವಸಂಸ್ಥೆ, ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಗೌರವವನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಆರ್. ಎನ್. ಹೆರಕಲ್ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ ಕಾಲೇಜಿನ ಸಮಗ್ರ ಬೆಳವಣಿಗೆ ಕುರಿತು ಮಾಹಿತಿ ನೀಡಿದರು, ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು, ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೆ. ಚಂದ್ರಶೇಖರ ವಂದಿಸಿದರು.
ಕಾರ್ಯಕ್ರಮದಲ್ಲಿ ಎನ್‌ಐಟಿ ನಾಗಪುರದ ಡಾ. ಅಶ್ವಿನ್ ಕೋಠಾರಿ, ಐಐಟಿ ಮದ್ರಾಸ್‌ನ ಡಾ. ಜಿ. ಆರ್. ದೊಡ್ಡಗೌಡರ, ಪ್ರೊ. ಟಿ. ವಿ. ರವಿ, ಸೂರತಕಲ್ಲಿನ ಡಾ.ಶಶಿಧರ ಕೂಲಗುಡಿ ಸೇರಿದಂತೆ ಬಿವಿವಿ ಸಂಘದ ಸದಸ್ಯರು, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ರುದ್ರಣ್ಣ ಅಕ್ಕಿಮರಡಿ, ಸಿ.ವಿ.ಕೋಟಿ, ರಾಜು ತಪಶೆಟ್ಟಿ, ಚೆನ್ನಯ್ಯ ಬಳೂಲಮಠ, ಅಶೋಕ ಸಜ್ಜನ ಬೇವೂರ, ಶರಣಪ್ಪ ಗುಳೆದ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.
ಪದವಿ ಪ್ರದಾನ: ೨೦೨೪–೨೫ನೇ ಸಾಲಿನಲ್ಲಿ ನಾಲ್ಕು ವಿಭಾಗಗಳ ೧೭ ವಿದ್ಯಾರ್ಥಿಗಳಿಗೆ ಬಿ.ಇ. ಆನರ್ಸ್ ಪದವಿ, ೧೧ ವಿಭಾಗಗಳ ೬೧೮ ವಿದ್ಯಾರ್ಥಿಗಳಿಗೆ ಬಿ.ಇ. ಪದವಿ ಹಾಗೂ ಮೂರು ಸ್ನಾತಕೋತ್ತರ ವಿಭಾಗಗಳ ೧೨೯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಒಟ್ಟು ೭೬೪ ವಿದ್ಯಾರ್ಥಿಗಳು ಪದವಿಯನ್ನು ಪಡೆದರು.
ಬಿ.ಇ. ವಿಭಾಗದಲ್ಲಿ ಒಟ್ಟು ೩೬ ರ‍್ಯಾಂಕ್‌ಗಳನ್ನು ನೀಡಲಾಗಿದ್ದು, ಎಂಟು ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್‌ನೊಂದಿಗೆ ೧೨ ಚಿನ್ನದ ಪದಕಗಳನ್ನು ಪಡೆದರು. ಸ್ನಾತಕೋತ್ತರ ವಿಭಾಗದಲ್ಲಿ ಏಳು ರ‍್ಯಾಂಕ್‌ಗಳನ್ನು ನೀಡಲಾಗಿದ್ದು, ಮೂವರು ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್‌ನೊಂದಿಗೆ ಮೂರು ಚಿನ್ನದ ಪದಕಗಳನ್ನು ಪಡೆದುಕೊಂಡರು.
ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಸ್ವರ ತಂಡದಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಡಾ. ಎಸ್. ಜಿ. ಕಂಬಾಳೆಮಠ ಹಾಗೂ ಡಾ. ವಿಜಯಲಕ್ಷ್ಮೀ ಜಿಗಜಿನ್ನಿ ಕಾರ್ಯಕ್ರಮ ನಿರೂಪಿಸಿದರು.

