ಬೆಂಗಳೂರು: ಅನುಮತಿ ಇಲ್ಲದೇ ಕಸ ಸುರಿಯುವವರ ವಾಹನವನ್ನು ಮುಲಾಜಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಸಿಎಂ ಡಿ.ಕೆ ಶಿವಕುಮಾರ್ (D K Shivakumar) ನಗರದ ಪೊಲೀಸರಿಗೆ ನಿರ್ದೇಶನ ನೀಡಿದರು.
ಹೆಬ್ಬಾಳ ಜಂಕ್ಷನ್ ಬಳಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಬೆಂಗಳೂರು ನಿಮ್ಮ ಆಸ್ತಿ. ಇದನ್ನು ಕಾಪಾಡಲು ಅಭಿಯಾನ ಆರಂಭಿಸಿದ್ದೇವೆ. ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವ ವಾಹನಗಳಿಗೆ ನೋಟೀಸ್ ಕೊಡಲಾಗಿತ್ತು. ಕ್ಯಾಮೆರಾ ಕಣ್ಗಾವಲು ಇಡಲಾಗಿತ್ತು. ಈಗ ಮತ್ತೆ ಯತಾಸ್ಥಿತಿಯಲ್ಲಿ ಕಸ ಸುರಿಯುತ್ತಿದ್ದಾರೆ. ಜನರಲ್ಲಿ ನಾವು ನಾಗರಿಕ ಪ್ರಜ್ಞೆ ತರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಹಸಿರಿನ ವಿಚಾರವಾಗಿ ನನ್ನಲ್ಲಿ ವಿಭಿನ್ನ ಆಲೋಚನೆ ಇದೆ. ಅದನ್ನು ಈಗ ನಾನು ಪ್ರಸ್ತಾಪ ಮಾಡುವುದಿಲ್ಲ, 100 ದಿನಗಳ ಕಾರ್ಯಕ್ರಮದ ವೇಳೆ ಪ್ರಕಟ ಮಾಡುತ್ತೇವೆ. ಬೆಂಗಳೂರು ಸ್ವಚ್ಛತೆ ಬಗ್ಗೆ ಟೀಕೆ ಟಿಪ್ಪಣಿ ಬರುತ್ತಿವೆ. ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಟೀಕೆಗಳು ಸಾಯುತ್ತವೆ. ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ. ಯಾರಾದರೂ ಇದನ್ನು ಅಧಿಕಾರಿಗಳ ಮೇಲೆ ದಾಳಿ ಎಂದು ಭಾವಿಸಿದ್ದರೆ ಅದು ಭ್ರಮೆ. ಇದು ಸರ್ಕಾರ, ಸಚಿವರು ಹಾಗೂ ಶಾಸಕರ ಮೇಲಿನ ದಾಳಿ ಎಂದೇ ಭಾವಿಸುತ್ತೇವೆ. ನಾವು ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಬೀದಿವ್ಯಾಪಾರದವರಿಗೆ ಬೇರೆ ಜಾಗಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ಬೀದಿ ವ್ಯಾಪಾರಿಗಳು ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಮಾಡಲು ಸಾಧ್ಯವಿಲ್ಲ. ಇಂದಿನಿಂದ ಆರಂಭವಾಗುತ್ತಿರುವ ಈ ಅಭಿಯಾನ ಬೆಂಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ. ಎಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿ ಈ ಅಭಿಯಾನ ಕೈಗೆತ್ತಿಕೊಳ್ಳಬೇಕು. ಇದು ನಿಮ್ಮ ಬೆಂಗಳೂರು, ಇಡೀ ದೇಶ ನಿಮ್ಮನ್ನು ಗಮನಿಸುತ್ತಿದೆ. ಅನೇಕ ರಾಷ್ಟ್ರೀಯ ನಾಯಕರು ಅನೇಕ ಮಾರ್ಗದರ್ಶನ ನೀಡಿದ್ದು, ಅದನ್ನು ಮುಂದುವರಿಸಿಕೊಂಡು ಹೋಗೋಣ ಎಂದು ಸಲಹೆ ನೀಡಿದರು .
ಎನ್‌ಜಿಒ, ಸಂಘ ಸಂಸ್ಥೆಗಳು ಸ್ವಚ್ಚತೆ ಜವಾಬ್ದಾರಿ ತೆಗೆದುಕೊಳ್ಳಬೇಕು
ದೇಶದ ಎಲ್ಲಾ ನಗರಗಳಲ್ಲೂ ಈ ಕಸ ಹಾಕುವ ಸಮಸ್ಯೆ ಇದೆ. ಬೆಂಗಳೂರಿನಲ್ಲಿ ಕಸದ ವಿಚಾರವಾಗಿ ಕಾರ್ಯಕ್ರಮ ಮಾಡಿ ಅನೇಕ ವರ್ಷಗಳಾಗಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ಹೊಸ ರೂಪ ನೀಡುತ್ತಿದ್ದೇವೆ. ಎನ್‌ಜಿಒಗಳು, ಸಂಘ ಸಂಸ್ಥೆಗಳು ಒಂದೊಂದು ಪ್ರದೇಶದ ಜವಾಬ್ದಾರಿ ಹೊತ್ತುಕೊಂಡರೆ ನಾನು ಸ್ವಾಗತಿಸುತ್ತೇನೆ. ನಾಲ್ಕು ರಸ್ತೆ ಜವಾಬ್ದಾರಿ ತೆಗೆದುಕೊಂಡು ಬಂದರೆ ಸಾಕು. ಈ ಅಭಿಯಾನಕ್ಕೆ ನಾಗರಿಕರ ಸಹಕಾರ ಬೇಕು ಎಂದು ತಿಳಿಸಿದರು.
ಕಾವೇರಿಯ ಒಂದು ಅಣೆಕಟ್ಟು ತುಂಬುತ್ತಿದ್ದು, ನೀರು ಹಿಡಿದಿಡಲು ಸಾಧ್ಯವಿಲ್ಲ
ಕಾವೇರಿ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ, ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಆರೋಪ ಮಾಡುತ್ತಾರೆ. ನಾವು ಇನ್ನೂ ನೀರು ಹರಿಸಿಲ್ಲ, ಅವರೇ ಸರ್ವಪಕ್ಷ ಸಭೆ ಕರೆಯುವ ಸಲಹೆ ನೀಡಿದ್ದಾರೆ. ಆದರೆ, ಇಂದು ಸಂಜೆ ವೇಳೆಗೆ ಒಂದು ಅಣೆಕಟ್ಟು ಭರ್ತಿಯಾಗಲಿದೆ. ಆ ಅಣೆಕಟ್ಟು ತುಂಬಿದ ಬಳಿಕವೂ ನೀರನ್ನು ಹಿಡಿದಿಡಲು ಆಗುವುದಿಲ್ಲ. ಅತ್ತ ತಮಿಳುನಾಡಿನವರು ಸುಪ್ರೀಂ ಕೋರ್ಟಿಗೆ ಹೋಗಲು ಸಿದ್ಥತೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಂದು ಈಗಾಗಲೇ ಹೇಳಿಕೆಗಳು ಬಂದಿವೆ. 36-39 ಕ್ಯೂಸೆಕ್ ನೀರು ಒಳಹರಿವು ಇದ್ದು, ನಮಗೆ ನೀರು ಹರಿಸಲು ಹೇಳಿರುವುದು 3,500 ಕ್ಯೂಸೆಕ್ ನೀರು. ವಿರೋಧ ಪಕ್ಷದವರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

