ಅಂಬೇಡ್ಕರ್ ಅಂದರೆ ಕೇವಲ ಒಂದು ಹೆಸಲ್ಲ ಅದು ಒಂದು ಚಳವಳಿ, ಒಂದು ಚಿಂತನೆ, ಒಂದು ಕ್ರಾಂತಿ. ಅವರು ಭಾರತದ ಸಮಾಜದಲ್ಲಿದ್ದ ಮೂಢನಂಬಿಕೆಗಳು, ಜಾತಿ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಹೋರಾಡಿದ ಮಹಾನ್ ನಾಯಕ. “ಶಿಕ್ಷಣ ಹೊಂದಿ, ಸಂಘಟಿತರಾಗಿ, ಹೋರಾಟ ಮಾಡಿ” ಎಂಬ ಅವರ ಮಂತ್ರವು ಇಂದಿಗೂ ಸಮಾನವಾಗಿ ಪ್ರಸ್ತುತವಾಗಿದೆ.
ನಾವು ನಿಜವಾಗಿಯೂ ಅಂಬೇಡ್ಕರ್ ಅವರ ಮಾರ್ಗವನ್ನು ಅನುಸರಿಸುತ್ತಿದ್ದೇವಯೇ...?
ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದರೂ, ನಮ್ಮ ಸಮಾಜದಲ್ಲಿ ಜಾತಿ ರಾಜಕಾರಣ ಇನ್ನೂ ಬಲವಾಗಿಯೇ ಉಳಿದಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆಯೇ ಹೊರತು, ಅಂಬೇಡ್ಕರ್ ಅವರ ಮೂಲ ಸಿದ್ಧಾಂತಗಳು ಅಳವಡಿಕೆಯಾಗುತ್ತಿವೆ ಎಂಬುವುದು ಸಂಶಯ. ಹಲವಾರು ರಾಜಕೀಯ ನಾಯಕರು ಅವರ ಹೆಸರನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ.
ಅಂಬೇಡ್ಕರ್ ಅವರು ಸದಾ ಅಧಿಕಾರವೇ ಸರ್ವಾಂಗಿಣ ಅಭಿವೃದ್ಧಿಗೆ ದಾರಿ ಎಂದು ನಂಬಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ದಲಿತ ಸಮುದಾಯದ ರಾಜಕೀಯ ಪ್ರತಿನಿಧಿತ್ವ ಇನ್ನೂ ಸಮರ್ಪಕವಾಗಿ ಕಂಡುಬರುತ್ತಿಲ್ಲ. ದೇಶಕ್ಕೆ ಇನ್ನೂ ಒಬ್ಬ ದಲಿತ ಪ್ರಧಾನಮಂತ್ರಿ ಅಥವಾ ಹಲವು ರಾಜ್ಯಗಳಲ್ಲಿ ಸಮರ್ಪಕ ದಲಿತ ನಾಯಕತ್ವ ಕಾಣಿಸದಿರುವುದು ಚಿಂತಾಜನಕ ಸಂಗತಿ. ಇದು ಕೇವಲ ರಾಜಕೀಯ ವೈಫಲ್ಯವಲ್ಲ ಇದು ಸಮುದಾಯದ ಒಗ್ಗಟ್ಟಿನ ಕೊರತೆಯನ್ನೂ ತೋರಿಸುತ್ತದೆ. ವಿಭಜನೆಯಿಂದ ದುರ್ಬಲವಾದ ದಲಿತ ಶಕ್ತಿಗಳು ಒಂದಾಗಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ನೀಡಿದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ನಾವು ಇನ್ನೂ ಹಿನ್ನಡೆಯಲ್ಲಿದ್ದೇವೆ.
ಇತಿಹಾಸದಲ್ಲಿ ಪುಣೆ ಒಪ್ಪಂದ ಮಹತ್ವದ ತಿರುವಾಗಿದ್ದು, ದಲಿತರ ರಾಜಕೀಯ ಹಕ್ಕುಗಳಿಗೆ ದಾರಿ ತೆರೆದಿತ್ತು. ಆದರೆ ಇಂದಿಗೂ ಆ ಹಕ್ಕುಗಳ ಸಂಪೂರ್ಣ ಅನುಭವ ನಮಗೆ ಸಿಗುತ್ತಿದೆಯೇ ಎಂಬ ಪ್ರಶ್ನೆ ಉಳಿದಿದೆ. ಅಂಬೇಡ್ಕರ್ ಜಯಂತಿ ಎಂದರೆ ಕೇವಲ ಮೆರವಣಿಗೆ, ಹಾರ-ಹೂವಿನ ಅಲಂಕಾರ ಮಾತ್ರವಲ್ಲ. ಅದು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ — ಈ ಮೂರು ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಸಾರುವುದು ನಮ್ಮ ಕರ್ತವ್ಯ.
ಅವರ ಆದರ್ಶಗಳನ್ನು ಅನುಸರಿಸುವ ಮೂಲಕವೇ ನಾವು ನಿಜವಾದ ಗೌರವವನ್ನು ಸಲ್ಲಿಸಬಹುದು. ಇಲ್ಲದಿದ್ದರೆ, ಆಚರಣೆಗಳು ಕೇವಲ ರೂಪಕಗಳಾಗಿ ಉಳಿದುಬಿಡುತ್ತವೆ. ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ, ನಾವು ಪ್ರತಿಯೊಬ್ಬರೂ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳೋಣ — “ನಾವು ಅವರ ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ ಅಥವಾ ಕೇವಲ ಅವರ ಹೆಸರನ್ನು ಮಾತ್ರ ಉಚ್ಛರಿಸುತ್ತಿದ್ದೇವೆಯೇ?
- ರತ್ನಾಕರ ಗೌಂಡಿ



