ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದ ಮೂಗುತಿಯು ಮಾಡರ್ನ್ ಟ್ರೆಂಡ್ ಹೆಸರಿನಲ್ಲಿ ಯುವತಿಯರ ಮೂಗಿನಿಂದ ಮರೆಯಾಗುತ್ತಿತ್ತು. ಆದರೆ ಕಾಲ ಕ್ರಮೇಣ ಹೊಸರೂಪ ಪಡೆದು ಪ್ಯಾಶನ್ ಹೆಸರಿನಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ದಾಪುಗಾಲಿಟ್ಟು ಸಾವಿರಾರು ವಿನ್ಯಾಸಗಳಲ್ಲಿ ಮನಸೂರೆಗೊಳಿಸುತ್ತಿದೆ.
ಚಿಕ್ಕ ಆಕಾರದಿಂದ ದೊಡ್ಡ ಆಕರಾದವರೆಗೂ ಗುರಿತಿಸಿಕೊಂಡಿರುವ ಮೂಗುತಿ ಪೇಟೆ ಹುಡುಗಿಯರ ಪಾಲಿಗೂ ಸೌಂದರ್ಯದ ಗುಟ್ಟಾಗಿದ್ದು ನೋಸ್ ರಿಂಗ್, ಸಣ್ಣ ರಿಂಗ್, ಸಾನಿಯಾ ನೋಸ್ ರಿಂಗ್, ರೌಂಡ್ ರಿಂಗ್, ಡೈಮಂಡ್ ರಿಂಗ್, ನತ್ತು, ಮಧ್ಯ ಭಾಗದ ರಿಂಗ್, ಕ್ಲಿಪ್ ಆನ್ ನೋಸ್ ರಿಂಗ್ ಹೀಗೆ ಹಲವಾರು ವಿಧಗಳನ್ನು ಕಾಣುತ್ತೆವೆ. ದಿನನಿತ್ಯದ ಬಳಕೆಗೆ ನತ್ತು ಎನ್ನುವ ಮೂಗುತಿಯನ್ನು ಸಂಪ್ರದಾಯಿಕವಾಗಿ ಮತ್ತು ಪರಂಪರೆಯ ಸಂಕೇತವಾಗಿ ಧರಿಸುತ್ತಾರೆ. ಫ್ಯಾಷನ್ ಶೋ ಗಳಿಗೆ ಹೇಳಿ ಮಾಡಿಸಿದ ಆಭರಣವಾಗಿರುತ್ತದೆ. ವೈವಾಹಿಕ ಜೀವನದ ಸಂಕೇತವಾಗಿ ಕರ್ನಾಟಕದಲ್ಲಿ ಅತಿ ಹೆಚ್ಚು ಬಳಕೆಯಲ್ಲಿದ್ದು ಮುತೈದೆಯರ ಪಾಲಿಗೆ ಮಂಗಳಕರ ವಸ್ತುವನ್ನಾಗಿ ಕಾಣುತ್ತಾರೆ. ಕೆಲವು ಆಯುರ್ವೇದ ನಂಬಿಕೆಗಳ ಪ್ರಕಾರ ಮೂಗಿನ ನಿರ್ದಿಷ್ಟ ಭಾಗದಲ್ಲಿ ಮೂಗುತಿ ಧರಿಸುವುದು ಮಹಿಳೆಯರ ಆರೋಗ್ಯಕ್ಕೆ ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಪ್ರಸವ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆಯೂ ಇದೆ.
ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ಮಹಿಳೆಯರು ಮೂಗುತಿಯನ್ನು ತಮ್ಮ ಮುಖಕ್ಕೆ ಅನುಗುಣವಾಗಿ ನಿರ್ದಿಷ್ಟವಾದ ಗಾತ್ರ ಮತ್ತು ವಿನ್ಯಾಸವಿರುವ ನೋಸ್ ರಿಂಗ್ ಹಾಕಿಕೊಳ್ಳುತ್ತಾರೆ. ಇನ್ನು ನಮ್ಮ ಕಡೆ ಮೂಗುತಿಯ ಸಂಪ್ರದಾಯವೇ ವಿಶಿಷ್ಟ ವಾಗಿದೆ ಏಕೆಂದರೆ ನಮ್ಮ ತಾಯಿಯ ತಾಯಿ ಅಂದರೆ ಅಜ್ಜಿಯು ಹೆಣ್ಣು ಮೊಮ್ಮಕ್ಕಳಿಗೆ ಒಂಬತ್ತು ವರ್ಷದವಳು ಇರುವಾಗಲೇ ಮೂಗುತಿಯನ್ನು ಚುಚ್ಚಿಸುತ್ತಾರೆ. ಮೂಗುತಿಗಾಗಿ ಮೂಗು ಚುಚ್ಚಲು ಕೆಲವುಕಡೆ ಬಂಗಾರದ ಮೊನಚಾದ ಕಡ್ಡಿಯನ್ನು ಬಳಸಿದರೆ ಇನ್ನು ಕೆಲವೆಡೆ ಪಾಪಸಕಳ್ಳಿ ಗಿಡದ ಮುಳ್ಳನ್ನು ಬಳಸಿ ಮೂಗಿಗೆ ಚಿಕ್ಕ ರಂದ್ರ ಮಾಡುತ್ತಾರೆ. ನೋವು ಬೇಗವಾಸಿಯಾಗಲೆಂದು ಅರಿಶಿನ ಪುಡಿ ಮತ್ತು ಅಡುಗೆ ಎಣ್ಣೆಯ ಮಿಶ್ರಣ ಲೇಪಿಸುವುದರ ಜೊತೆಗೆ ಬೆವಿನ ಗಿಡದ ಕಡ್ಡಿಯನ್ನು ಮೂಗಿಗ ಮಾಡಿದ ರಂದ್ರಕ್ಕೆ ಚುಚ್ಚುತ್ತಾರೆ. ಇದನ್ನು ಕೂಡ ಹಬ್ಬದಂತೆ ಸಂಭ್ರಮಿಸುವ ಗ್ರಾಮೀಣ ಜನರು ಉಡದಟ್ಟಿ ಎನ್ನುವ ಪದ್ಧತಿ ಪ್ರಕಾರ ಸೀರೆಯನ್ನು ಕೊಟ್ಟು ಊರಿನ ಜನಕ್ಕೆ ಊಟ ಹಾಕುವ ಪದ್ಧತಿಯಿದೆ. ಆಧುನಿಕ ಜಗತ್ತು ಎಷ್ಟೇ ಮುಂದುವರೆದರು ಹಳೆಯ ಸಂಪ್ರದಾಯಗಳು ತಮ್ಮ ಮಹತ್ವವನ್ನು ಕಳೆದುಕೊಂಡಿಲ್ಲ ಹಾಗೆಯೇ ಹಳೆಯ ಸಂಪ್ರದಾಯಗಳೇ ಇಂದು ಟ್ರೆಂಡ್ ರೂಪದಲ್ಲಿ ತಮ್ಮದೇಯಾದ ವಿಭಿನ್ನ ಛಾಪನ್ನು ಮೂಡಿಸಿದೆ. ಏನೇ ಹೇಳಿ ಮೂಗುತಿ ಇದ್ದ ಮುಖ ಅರಳಿ ನಿಂತ ಹುಣ್ಣಿಮೆಯ ಚಂದ್ರನಂತೆ ಮಿನುಗುತ್ತದೆ.
- ಅರುಂದತಿ ಮುಳ್ಳೂರ, ಬಾಗಲಕೋಟೆ



