ಮುಂಬೈ: ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ ಸಾವರ್ಕರ್ ಅವರು ಮುಸ್ಲಿಮರನ್ನು ದ್ವೇಷಿಸುತ್ತಿರಲಿಲ್ಲ. ಬದಲಿಗೆ ಅವರ ಪ್ರಗತಿಗೆ ಅಗತ್ಯವಾದ ಮಾರ್ಗಗಳನ್ನು ತಮ್ಮ ಬರಹಗಳಲ್ಲಿ ವಿವರಿಸಿದ್ದರು ಎಂದು ಸಾವರ್ಕರ್ ಅವರ ಮೊಮ್ಮಗನ ಮಗ ಸತ್ಯಕಿ ಸಾವರ್ಕರ್ ಪುಣೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
2023ರಲ್ಲಿ ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಭಾಷಣಕ್ಕೆ ಸಂಬಂಧಿಸಿದಂತೆ ಸತ್ಯಕಿ ಸಾವರ್ಕರ್ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸತ್ಯಕಿ ಅವರು ಸಾಕ್ಷ್ಯ ಹೇಳಿಕೆ ನೀಡುತ್ತಿದ್ದು, ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಡಿ. ಪವಾರ್ ಅವರು ಮಂಗಳವಾರ (ಸೆ.1) ಅವರನ್ನು ಅಡ್ಡ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ, ಸಾವರ್ಕರ್ ಅವರು ಕೆಲವರೊಂದಿಗೆ ಸೇರಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು ಹಾಗೂ ಅದರಿಂದ ಸಂತೋಷಪಟ್ಟಿದ್ದರು ಎಂದು ಸಾವರ್ಕರ್ ಅವರ ಬರಹವನ್ನು ಉಲ್ಲೇಖಿಸಿದ್ದರು ಎಂದು ಸತ್ಯಕಿ ನ್ಯಾಯಾಲಯದಲ್ಲಿ ವಿವರಿಸಿದರು. ಈ ಹೇಳಿಕೆಯಿಂದ ಸಾವರ್ಕರ್ ಅವರನ್ನು `ಮುಸ್ಲಿಂ ವಿರೋಧಿ ಹಾಗೂ ಗುಂಪು ಹಿಂಸಾಚಾರ ನಡೆಸುವ ವ್ಯಕ್ತಿ’ ಎಂಬಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಾವರ್ಕರ್ ಎಂದಿಗೂ ಮುಸ್ಲಿಮರನ್ನು ದ್ವೇಷಿಸಿರಲಿಲ್ಲ. ಅವರ ಬರಹಗಳಲ್ಲಿ ಮುಸ್ಲಿಮರ ಪ್ರಗತಿಗೆ ಅಗತ್ಯವಾದ ಮಾರ್ಗ ಮತ್ತು ವಿಧಾನಗಳನ್ನು ವಿವರಿಸಿದ್ದರು. ಅಡ್ಡ ವಿಚಾರಣೆ ವೇಳೆ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸಾವರ್ಕರ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಬಗ್ಗೆಯೂ ಪ್ರಶ್ನಿಸಲಾಯಿತು. ಬ್ರಿಟಿಷರು ಸಾವರ್ಕರ್ ವಿರುದ್ಧ ಯುದ್ಧ ಸಾರಿದ ಆರೋಪ ಹಾಗೂ ನಾಸಿಕ್ ಕಲೆಕ್ಟರ್ ಜಾಕ್ಸನ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪ ಮಾಡಿದ್ದರು ಎಂದು ಸತ್ಯಕಿ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ಹತ್ಯೆ ಕುರಿತು ವಿಚಾರಣೆ ನಡೆಸಲು ರಚಿಸಲಾಗಿದ್ದ ಕಪೂರ್ ಆಯೋಗದ ಬಗ್ಗೆಯೂ ವಕೀಲರು ಪ್ರಶ್ನಿಸಿದರು. ಆಯೋಗವನ್ನು ಸಾವರ್ಕರ್ ಅವರ ಪಾತ್ರ ನಿರ್ಧರಿಸಲು ಮಾತ್ರ ರಚಿಸಲಾಗಿರಲಿಲ್ಲ ಎಂದು ಸತ್ಯಕಿ ಸ್ಪಷ್ಟಪಡಿಸಿದರು. ಇದೇ ವೇಳೆ, ತಮ್ಮ ತಾತ ಗೋಪಾಲ್ ಗೋಡ್ಸೆ ಅವರು ಗಾಂಧಿ ಹತ್ಯೆ ವಿಚಾರಣೆಗೆ ಸಂಬಂಧಿಸಿದಂತೆ `ಗಾಂಧಿ ಹತ್ಯಾ ಆಣಿ ಮೀ’ ಸೇರಿದಂತೆ ಪುಸ್ತಕಗಳನ್ನು ಬರೆದಿದ್ದರು ಎಂದು ಸತ್ಯಕಿ ಒಪ್ಪಿಕೊಂಡರು.
ಆರ್‌ಎಸ್‌ಎಸ್ ಕುರಿತು ವಿಡಿಯೊ ಪ್ರದರ್ಶನ:
ವಿಚಾರಣೆಯಲ್ಲಿ ಗೋಪಾಲ್ ಗೋಡ್ಸೆ ಅವರ ಹಳೆಯ ವಿಡಿಯೋ ಸಂದರ್ಶನಗಳನ್ನೂ ರಾಹುಲ್ ಗಾಂಧಿ ಪರ ವಕೀಲರು ನ್ಯಾಯಾಲಯದಲ್ಲಿ ಪ್ರದರ್ಶಿಸಿದರು. ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾ ನಡುವಿನ ಸೈದ್ಧಾಂತಿಕ ವ್ಯತ್ಯಾಸಗಳ ಕುರಿತು ಗೋಪಾಲ್ ಗೋಡ್ಸೆ ಮಾತನಾಡಿರುವುದು ಹಾಗೂ ನಾಥೂರಾಮ್ ಗೋಡ್ಸೆ ಆರ್‌ಎಸ್‌ಎಸ್‌ನ ಸ್ವಯಂಸೇವಕರಾಗಿದ್ದರು ಎಂದು ಹೇಳಿರುವ ಅಂಶಗಳು ವಿಡಿಯೋದ ಲಿಖಿತ ಪ್ರತಿಯಲ್ಲಿ ಉಲ್ಲೇಖವಾಗಿದೆ.
ಈ ಪ್ರಶ್ನೆಗಳಿಗೆ ಸತ್ಯಕಿ ಪರ ವಕೀಲ ಸಂಗಮ್ ಕೊಥಾಲ್ಕರ್ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಆಕ್ಷೇಪಗಳನ್ನು ಅಂತಿಮ ತೀರ್ಪಿನ ಸಂದರ್ಭದಲ್ಲಿ ಪರಿಗಣಿಸುವುದಾಗಿ ನ್ಯಾಯಾಲಯ ತಿಳಿಸಿದೆ. ಮ್ಯಾಜಿಸ್ಟ್ರೇಟ್ ಅಮೋಲ್ ಶಿಂಧೆ ಅವರ ಮುಂದೆ ವಿಚಾರಣೆ ನಡೆಯುತ್ತಿದ್ದು, ಸತ್ಯಕಿ ಸಾವರ್ಕರ್ ಅವರ ಅಡ್ಡ ವಿಚಾರಣೆ ಸೆಪ್ಟೆಂಬರ್ 3ರಂದು ಮುಂದುವರಿಯಲಿದೆ.




