ಧಾರವಾಡ: ಸಿದ್ದರಾಮಯ್ಯನವರ ಮೂರು ವರ್ಷದ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ತೀವ್ರ ಹದಗೆಟ್ಟು ಹೋಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಅವರ ಅವಧಿಯಲ್ಲಾದರೂ ರಾಜ್ಯ ಅಭಿವೃದ್ಧಿ ಕಾಣಲಿ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 136 ಸೀಟು ಗೆಲ್ಲಿಸಿ ಅಧಿಕಾರಕ್ಕೆ ತಂದ ಜನರಿಗೆ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ನ್ಯಾಯ ಸಿಕ್ಕಿಲ್ಲ. ಈ ರಾಜ್ಯ ಅಭಿವೃದ್ಧಿ ಆಗಲಿದೆ, ಸುಭಿಕ್ಷೆ ಹೊಂದಲಿದೆ ಎಂದು ಜನ ಕಾಯುತ್ತಿದ್ದರು. ಆದರೆ ಯಾವುದೇ ಅಭಿವೃದ್ಧಿ ಆಗಿಲ್ಲ. ಅಲ್ಪಸಂಖ್ಯಾತರನ್ನು ಓಲೈಸುವುದು ಬಿಟ್ಟು ಬೇರೆ ಕೆಲಸ ಆಗಿಲ್ಲ. ಎಲ್ಲರನ್ನು ಸರಿಯಾಗಿ ನೋಡಿಕೊಂಡು ಹೋಗುವ ಕೆಲಸ ಆಗಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ ಈ ರಾಜ್ಯದಲ್ಲಿ ಆಗಿದೆ ಎಂದರು.
ಡಿಕೆಶಿಗೆ ಒಂದು ಅವಕಾಶ ಸಿಕ್ಕಿದೆ. ಸರಿಯಾಗಿ ಅದನ್ನು ಉಪಯೋಗ ಮಾಡಿ, ಎಲ್ಲರನ್ನು ಸಮನಾಗಿ ಕಾಣುವ ಕೆಲಸ ಮಾಡಬೇಕು. ಕಾಂಗ್ರೆಸ್‌ಗೆ 136 ಸೀಟು ಬಂದಿವೆ ಎಂದರೆ ಅಲ್ಪಸಂಖ್ಯಾತರು ಅಷ್ಟೇ ಅವರಿಗೆ ಮತ ಹಾಕಿಲ್ಲ, ಎಲ್ಲರೂ ಹಾಕಿದ್ದಾರೆ. ಎಲ್ಲರ ಕಾಳಜಿ ಆಗಲಿ. ಹದಗೆಟ್ಟ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡು ಹೋಗಲು ಡಿಕೆಶಿ ಅವರು ಚಾಕಚಕ್ಯತೆ ಉಪಯೋಗ ಮಾಡಬೇಕಾಗುತ್ತದೆ ಎಂದು ಹೇಳಿದರು.



