ಬೆಳಗಾವಿ : ಖಾನಾಪುರ ತಾಲೂಕಿನ ಹಳ್ಳಿಯೊಂದರಿಂದ ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯವರೆಗೂ ವ್ಯಾಪಿಸಿದ್ದ ಕಂಟ್ರಿ ಬಂದೂಕು ತಯಾರಿಕೆ ಮತ್ತು ಮಾರಾಟ ಜಾಲವೊಂದನ್ನು ಭೇಧಿಸಿರುವ ಖಾನಾಪುರ ಠಾಣೆ ಪೊಲೀಸರು ಒಟ್ಟು 13 ಜನರನ್ನು ಬಂಧಿಸಿ, 9 ಕಂಟ್ರಿ ಬಂದೂಕು, 48 ಜೀವಂತ ಕಾಡತೊಸು ಹಾಗೂ ತಯಾರಿಕೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಖಾನಾಪುರ ತಾಲೂಕಿನ ಕಾಟಗಾಳಿಯ ಮಾರುತಿ ಶ್ರೀಕಾಂತ ಸುತಾರ, ಮುಖ್ಯ ಕಂಟ್ರಿ ಬಂದೂಕು ತಯಾರಿಕೆದಾರ. ಈತನ ಮೂಲಕ ಖರೀದಿ ಮಾಡಿದ್ದ 8 ಜನ, ಈತನಿಗೆ ಮದ್ದುಗುಂಡು ಕೊಟ್ಟವರು, ಬಿಡಿಭಾಗಗಳನ್ನು ವೆಲ್ಡಿಂಗ್ ಮಾಡಿ ಕೊಟ್ಟವರು ಸೇರಿದಂತೆ ಎಲ್ಲರನ್ನೂ ಬಂಧಿಸಿದ್ದಾರೆ ಎಂದು ಹೇಳಿದರು.
ಮಾರುತಿ, ತನ್ನ ಮನೆಯಲ್ಲೇ 2024ರಿಂದ ಕಂಟ್ರಿ ಬಂದೂಕು ತಯಾರಿಸುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಖಾನಾಪುರ ಪೊಲೀಸರು ಬಂಧಿಸಿದ್ದರು. ಆಗ ತಯಾರಿಕೆಯಲ್ಲಿದ್ದ ಒಂದು ಕಂಟ್ರಿ ಬಂದೂಕು ಪತ್ತೆಯಾಗಿತ್ತು. ಈತನಿಂದ ಖರೀದಿ ಮಾಡಿದ್ದ ಕಾಟಗಾಳಿಯ ಸೋಮನಾಥ ಪ್ರಲ್ಹಾದ ಚೌಗುಲೆ, ಸಂತೋಷ ಶಿವಾಜಿ ನಾಯಕ, ಮಾರುತಿ ಯಲ್ಲಪ್ಪ ಗುಡದ್ಯಾಗೋಳ, ಬಾಳು ಭರಮಾಣಿ ನಾಯಕ, ಬೆಳಗಾವಿ ಮಾರ್ಕಂಡೇಯ ನಗರದ ಲಕ್ಷ್ಮಣ ಬಾಳಪ್ಪ ಗುಜನಾಳ, ಮೋದೆಕೊಪ್ಪದ ಬಸವರಾಜ ಗಂಗಪ್ಪ ಸಾಲೋಟಗಿ, ಬಸವಂತ ಭರಮಾಣಿ ಯರಮಾಳಕರ, ಲಕ್ಷ್ಮಣ ಈಶ್ವರ ಗುರವರನ್ನು ಬಂಧಿಸಿ ತಲಾ ಒಂದರಂತೆ ಒಟ್ಟು 8 ಕಂಟ್ರಿ ಬಂದೂಕು ಜಪ್ತಿಯಾಗಿವೆ. ಹೊಸದಾಗಿ ಬಂದೂಕು ಮಾಡಲು ಹಣ ಕೊಟ್ಟಿದ್ದ ಬೆಳಗಾವಿ ತಾಲೂಕಿನ ಕಾಳೇನಟ್ಟಿಯ ಮರಿಯಪ್ಪ ನಿಂಗಪ್ಪ ನಾಯಕನನ್ನೂ ಬಂಧಿಸಿದ್ದಾರೆ ಎಂದು ಹೇಳಿದರು.
ಬುಕ್‌ಸ್ಟಾಲ್‌ದಲ್ಲಿ ಮದ್ದುಗುಂಡು:
ತನಿಖೆಯಲ್ಲಿ ವಿಶ್ವನಾಥ ಸಂತೋಷ ಸೀತಾರಾಮ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ತನ್ನ ಬುಕ್ ಸ್ಟಾಲ್‌ದಲ್ಲಿ ಬಂದೂಕಿನ ಬಿಡಿಭಾಗ, ಮದ್ದುಗುಂಡುಗಳನಿಟ್ಟುಕೊಂಡು ಮಾರಾಟ ಮಾಡುತ್ತಿರುವುದು ಗೊತ್ತಾಗಿತ್ತು. ಈತನನ್ನು ಬಂಧಿಸಿ ಬಂದೂಕಿನ 21ಟ್ರೀಗರ್, 5 ಗಡ್ಡಾ ಹೆಡ್‌ಗಳು, 15 ನಿಪ್ಪಲ್, ಒಂದು ಸಿಲಿಂಗ್ ಬೆಲ್ಟ್ ಹಾಗೂ 34 ಮದ್ದು ತುಂಬಿದ ಪ್ಯಾಕೇಟ್, 449 ಚೇರೆ (ಸೀಸಿನ ಗೋಲಿ), 420 ಕೇಪ್, 48 ಜೀವಂತ ಕಾಡತೂಸುಗಳನ್ನು ಜಪ್ತಿ ಮಾಡಲಾಗಿದೆ.
ಈತನಿಗೆ ಗನ್‌ಶಾಪ್ ಅವಧಿ ಮುಗಿದಿದ್ದರೂ ಮದ್ದುಗುಂಡು ಹಾಗೂ ಬಂದೂಕಿನ ಬಿಡಿಭಾಗಗಳನ್ನು ಮಾರಿದ್ದ ಬೆಳಗಾವಿ ಗೋಂಧಳಿಗಲ್ಲಿಯ ವಿಜಯ ಅಪ್ಪಾಜಿ ಅನಗೋಳಕರ ಹಾಗೂ ಮುಖ್ಯ ಆರೋಪಿ ಮಾರುತಿಗೆ ಬಂದೂಕಿನ ಬ್ಯಾರೆಲ್‌ಗಳ ವೆಲ್ಡಿಂಗ್ ಮಾಡಿಕೊಡುತ್ತಿದ್ದ ದೇಸೂರ ಗ್ರಾಮದ ಮಹೇಶ ಮಾರುತಿ ಲಕ್ಕೇಬೈಲಕರನನ್ನು ಬಂಧಿಸಿ, ವೆಲ್ಡಿಂಗ್ ಮಷಿನ್ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.



