ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ನಾನೇ ಹೋರಾಟ ಮಾಡುತ್ತೇನೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ತಮಿಳುನಾಡಿಗೆ ನೀರು ಬಿಟ್ರೆ ನಾನೇ ಹೋರಾಟ ಮಾಡ್ತೀನಿ. ನಾನು ರೈತರ ಪರ, ರೈತರಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯ ಸರ್ಕಾರದ ಬಗ್ಗೆ ಅದು, ಇದು ಎಂದು ಮಾತನಾಡುತ್ತಾರೆ. ನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಯಾವ ರೀತಿಯ ಆದೇಶ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಕೊಡಬಾರದು. ಸದ್ಯ ಕಬಿನಿ ಜಲಾಶಯ ತುಂಬಿರುವ ಕಾರಣ ನೀರು ತಮಿಳುನಾಡಿನತ್ತ ಹರಿಯುತ್ತಿದೆ. ಆದರೆ, ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಒಂದು ವೇಳೆ ಸರ್ಕಾರ ನೀರು ಬಿಟ್ಟರೆ ಸರ್ಕಾರದ ವಿರುದ್ಧ ನಾನೇ ಹೋರಾಟ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಬಂದ್‌ಗೂ ಗಣಿಗ ರವಿಕುಮಾರ್ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಂದ್‌ನ್ನು ಅವರ ಮನೆಗಾಗಿ ಮಾಡುತ್ತಿಲ್ಲ. ಕನ್ನಡ ಪರ ಹೋರಾಟಗಾರರು ನೆಲ, ಜಲದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಬಂದ್ ಕರೆ ಕೊಟ್ಟಿರುವುದರಲ್ಲಿ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ವಿರುದ್ಧವೂ ಗಣಿಗ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಡೆಸುತ್ತಿರುವ ಹೋರಾಟದ ವಿಚಾರವಾಗಿಯೂ ಗಣಿಗ ರವಿಕುಮಾರ್ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್‌ನವರು ಎಷ್ಟು ಜನ ಬೇಲ್ ಮೇಲೆ ಇದ್ದಾರೆ? ಬೇಲ್ ಮೇಲೆ ಇದ್ದ ತಕ್ಷಣ ಅಪರಾಧಿಯಾಗಲ್ಲ. ಕೋರ್ಟ್ ಬೇಲ್ ಕೊಟ್ಟ ಮೇಲೆ ಕೇಳೋದಕ್ಕೆ ಇವರ್ಯಾರು? ಕುಮಾರಸ್ವಾಮಿ ಅವರ ಮೇಲೂ ಪ್ರಕರಣ ಇದೆ. ಎಚ್.ಡಿ. ರೇವಣ್ಣ ಅವರ ಮೇಲೂ ಕೇಸ್ ಇದೆ. ಹಾಗಾದರೆ ಇವರೇನು ಮಾಡ್ತಾರೆ? ಬಿಜೆಪಿಯವರಿಗೆ ಕೆಲಸ ಇಲ್ಲ. ಅದಕ್ಕೆ ಹೀಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

