ಬೆಂಗಳೂರು: ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತ ಹೇಳಿದ್ದಾರೆ. ಆದರೆ ರಾಜಕೀಯ ನಿವೃತ್ತಿ ಆಗಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಇವತ್ತಿನ ರಾಜಕೀಯದಲ್ಲಿ ಕೆಟ್ಟ ಪರಿಸ್ಥಿತಿ ಇದೆ ಅಂತ ಹೇಳಿರೋದು. ಇವತ್ತಿನ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತಾಡಿದ್ದಾರೆ. ಸಿದ್ದರಾಮಯ್ಯ ಅವರು 8 ವರ್ಷ ಸಿಎಂ ಆಗಿ ಉತ್ತಮ ಆಡಳಿತ ಕೊಟ್ಟವರು. ಸಿಎಂ ಇದ್ದಾಗಲು ಚುನಾವಣೆಗೆ ನಿಲ್ಲೋದಿಲ್ಲ ಅಂತ ಒಮ್ಮೆ ಹೇಳಿದ್ರು. ಸಿದ್ದರಾಮಯ್ಯ ಚುನಾವಣೆ ರಾಜಕೀಯಕ್ಕೆ ಮಾತ್ರ ನಿವೃತ್ತಿ ಹೇಳಿದ್ದಾರೆ. ರಾಜಕೀಯ ನಿವೃತ್ತಿ ಆಗಲ್ಲ ಎಂದರು.
ಸಿದ್ದರಾಮಯ್ಯ ಅವರ ಆದರ್ಶ, ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಒಟ್ಟಾಗಿ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದರು.
ಒಂದು ವಾರದ ಒಳಗೆ ಸಚಿವ ಸಂಪುಟ ವಿಸ್ತರಣೆ ಆಗುವ ವಿಶ್ವಾಸ ಇದೆ. ಸಿಎಂ ಅವರು ಇಂದು ದೆಹಲಿಗೆ ಹೋಗಿದ್ದಾರೆ. ಸಿಎಂ ಜೊತೆ ರಾಜ್ಯದ ನಾಯಕರು ಹೋಗಿದ್ದಾರೆ. ನಾಳೆ ಹೈಕಮಾಂಡ್ ನಾಯಕರ ಜೊತೆ ಸಭೆ ಮಾಡಬಹುದು. 4-5 ದಿನಗಳಲ್ಲಿ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಸಂಪುಟ ವಿಸ್ತರಣೆ ಆಗಲಿದೆ ಎಂದರು.
ಬಹಳ ಎಂಎಲ್‌ಎಗಳು ದೆಹಲಿಗೆ ಹೋಗಿದ್ದಾರೆ. ಯಾವ ಮಾನದಂಡದಲ್ಲಿ ಸಚಿವ ಸ್ಥಾನ ಕೊಡುತ್ತಾರೆ ಗೊತ್ತಿಲ್ಲ. ಜಾತಿ, ಜಿಲ್ಲೆ, ಯುವಕರು ಯಾವ ಆಧಾರದಲ್ಲಿ ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ದೆಹಲಿಗೆ ಹೋಗಿ ಕೇಳಿದ್ದೆ. ನನಗೆ ಸ್ಥಾನ ಕೊಡಬಹುದು ಎಂಬ ವಿಶ್ವಾಸ ಇದೆ. ಆದರೂ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದು ನುಡಿದರು.
ಒಕ್ಕಲಿಗ, ಲಿಂಗಾಯತ, ಕುರುಬ, ಮುಸ್ಲಿಂ ಎಲ್ಲರು ಕೇಳುತ್ತಾರೆ. ಅವರ ಹಕ್ಕು ಮಂಡನೆ ಅವರು ಮಾಡುತ್ತಾರೆ. ಏನು ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.




