ಬಿಯಾಂಡ್ ಹುಬ್ಬಳ್ಳಿಗೆ ಅಡ್ಡಿಯಾಗಿರುವ ಬಿಜೆಪಿ ಅಭ್ಯರ್ಥಿಯನ್ನು ಬೆಳಗಾವಿ ಜನ ತಿರಸ್ಕರಿಸಲಿದ್ದಾರೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

May 6, 2024 - 09:30
 38
Google  News Join WhatsApp Join Telegram View ePaper

ಬಿಯಾಂಡ್ ಹುಬ್ಬಳ್ಳಿಗೆ ಅಡ್ಡಿಯಾಗಿರುವ ಬಿಜೆಪಿ ಅಭ್ಯರ್ಥಿಯನ್ನು ಬೆಳಗಾವಿ ಜನ ತಿರಸ್ಕರಿಸಲಿದ್ದಾರೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Panchayat Swaraj Samachar News Desk.

ಬೆಳಗಾವಿ : ಅಭಿವೃದ್ಧಿ ಯೋಜನೆಗಳು ಹುಬ್ಬಳ್ಳಿ ದಾಟಿ ಬೆಳಗಾವಿಗೆ ಬರದಂತೆ ತಡೆಯೊಡ್ಡುತ್ತ ಬಂದಿರುವ ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸುವ ಮೂಲಕ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ಗೃಹ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹಿಂದಿನಿಂದಲೂ ಬೆಳಗಾವಿ ಅಭಿವೃದ್ಧಿಯ ವಿರೋಧಿ. ಸಾಧ್ಯವಾದಾಗಲೆಲ್ಲ ಬೆಳಗಾವಿಯಿಂದ ಯೋಜನೆಗಳನ್ನು ಕಿತ್ತುಕೊಂಡಿದ್ದೇ ಹೆಚ್ಚು. ಯಾವುದೇ ಯೋಜನೆಗಳು ಹುಬ್ಬಳ್ಳಿ ದಾಟಿ ಬೆಳಗಾವಿಗೆ ಬಾರದಂತೆ ತಡೆಯುತ್ತ ಬಂದಿದ್ದಾರೆ. ಈ ವಿಷಯ ಕುರಿತು ಬೆಳಗಾವಿಯ ಜನರು ಅನೇಕ ಬಾರಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಮತ್ತೆ ಅಂತವರಿಗೆ ಮತ ನೀಡಲು ಬೆಳಗಾವಿಯ ಜನರಿಗೆ ಹೇಗೆ ಮನಸ್ಸು ಬರುತ್ತದೆ ಎಂದು ಪ್ರಶ್ನಿಸಿದರು.

ಬೆಳಗಾವಿಯಿಂದ ಹೆಚ್ಚಿನ ವಿಮಾನಗಳು ಹಾರಾಟ ನಡೆಸುತ್ತಿರುವುದನ್ನು ಗಮನಿಸಿ ಹೊಟ್ಟೆ ಉರಿ ಮಾಡಿಕೊಂಡ ಅವರು ಉಡಾನ್ ಯೋಜನೆಯನ್ನು ಬೆಳಗಾವಿ ತಪ್ಪಿಸಿ ಹುಬ್ಬಳ್ಳಿಗೆ ಮಾತ್ರ ಮಾಡಿಸಿಕೊಂಡು ಇಲ್ಲಿಂದ ಬಹುತೇಕ ಎಲ್ಲ ವಿಮಾನಗಳು ಶಿಫ್ಟ್ ಆಗುವಂತೆ ಮಾಡಿದರು. ಆಗ ಬೆಳಗಾವಿಯ ಜನರು ಬೀದಿಗಿಳಿದು ಹೋರಾಟ ಮಾಡಿದರು. ನಂತರ ಎರಡನೇ ಲಿಸ್ಟ್ ನಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೂ ಉಡಾನ್ ಯೋಜನೆ ನೀಡಲಾಯಿತು ಎಂದು ಹೆಬ್ಬಾಳಕರ್ ನೆನಪಿಸಿದರು. 

ಒಂದೇ ಭಾರತ ಎಕ್ಸ್ ಪ್ರೆಸ್ ಸೇರಿದಂತೆ ರೈಲ್ವೆ ಸೌಲಭ್ಯ ಬೆಳಗಾವಿ ಬರದಂತೆ ಮೊದಲಿನಿಂದಲೂ ತಡೆಯುತ್ತಿದ್ದಾರೆ. ಚನ್ನಮ್ಮ ಎಕ್ಸಪ್ರೆಸ್ ಬೆಳಗಾವಿಗೆ ವಿಳಂಬವಾಗಿ ತಲುಪಲೂ ಇವರೇ ಕಾರಣ. ಹೈಕೋರ್ಟ್ ಪೀಠ ಬೆಳಗಾವಿಯಲ್ಲಿ ಆಗಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ತಡೆದರು. ಐಟಿ ಕಂಪನಿಗಳು ಒಂದೂ ಬೆಳಗಾವಿಯತ್ತ ಮುಖ ಮಾಡದಂತೆ ತಡೆದರು. ಮುಖ್ಯಮಂತ್ರಿಯಾಗಿದ್ದಾಗ, ಕೈಗಾರಿಕೆ ಸಚಿವರಾಗಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮನಸ್ಸು ಮಾಡಿದ್ದರೆ ಬೆಳಗಾವಿಯನ್ನು ಸಾಕಷ್ಟು ಅಭಿವೃದ್ಧಿಪಡಿಸಬಹುದಿತ್ತು. ಕಾಟಾಚಾರಕ್ಕೆ ಒಂದೆರಡು ಸಭೆ ಮಾಡಿದರಾದರೂ ಏನನ್ನು ಸಾಧಿಸಿದರು ಎನ್ನುವುದನ್ನು ಹೇಳಲಿ? ಸಭೆಯಲ್ಲಿ ಬೆಳಗಾವಿ ಪರವಾಗಿ ಮಾತನಾಡಿದವರ ಮೇಲೆ ರೇಗಾಡಿದ್ದರು ಎಂದು ಸಚಿವರು ಹೇಳಿದರು.

 4 ವರ್ಷದ ಹಿಂದೆ ಬೆಳಗಾವಿಯಲ್ಲಿ ಬಂಡವಾಳ ಹೂಡಿಕೆದಾರರ ಸಭೆ ನಿಗದಿಯಾಗಿದ್ದನ್ನು ಏಕಾ ಏಕಿ ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದೇಕೆ ಎನ್ನುವುದನ್ನು ಹೇಳಲಿ. ಜಿಲ್ಲಾಧಿಕಾರಿಗಳು ಸಮಾವೇಶದ ಸಿದ್ಧತಾ ಸಮಿತಿಯನ್ನು ಸಹ ರಚಿಸಿದ್ದರು. ಆಗ ಬೆಳಗಾವಿ ಬಿಜೆಪಿಯವರೇ ಕೆಲವರು ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದನ್ನು ತೀವ್ರವಾಗಿ ವಿರೋಧಿಸಿದ್ದರು. ಪಟ್ಟಿ ಮಾಡುತ್ತ ಹೋದರೆ ಅವರು ಬೆಳಗಾವಿಗೆ ಮಾಡಿರುವ ದ್ರೋಹ ಸಾಕಷ್ಟಿದೆ. ಇಂದು ಇದನ್ನೆಲ್ಲ ಮರೆತು ಮತ ಹಾಕಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಅವರಿಗೆ ಬೆಳಗಾವಿಯ ಜನರ ಮತ ಕೇಳಲು ಮುಖವಿಲ್ಲ. ಹಾಗಾಗಿಯೇ ಮೋದಿ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ. ನಾನು ಕೆಲಸ ಮಾಡಿದ್ದು ನೋಡಿ ಮತ ಹಾಕಿ, ನಾನು ಮುಂದೆ ಇಂತಿಂತಹ ಅಭಿವೃದ್ದಿ ಮಾಡುತ್ತೇನೆ ಎನ್ನುವ ಮಾತು ಅವರಿಂದ ಬರುತ್ತಿಲ್ಲ. ಕೇವಲ ಯಾರನ್ನೋ ನೋಡಿ ಓಟು ಕೇಳಿದರೆ ಕೊಡಲು ಸಾಧ್ಯವೇ? ನಮಗೆ ಬೆಳಗಾವಿಯನ್ನು ಅಭಿವೃದ್ಧಿ ಮಾಡುವ ಸಂಸದ ಬೇಕು. ಜನರ ಕೈಗೆ ಸಿಗುವ ಸಂಸದ ಬೇಕು. ಹಾಗಾಗಿ ಜನರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಮೃಣಾಲ ಹೆಬ್ಬಾಳಕರ್ ಆಯ್ಕೆಯಾಗಿ 3 ತಿಂಗಳೊಳಗೆ ಒಂದು ತಜ್ಞರ ಸಮಿತಿ (ಥಿಂಕ್ ಟ್ಯಾಂಕ್) ರಚನೆ ಮಾಡಿ ಅವರಿಂದ ಸಲಹೆ ಸೂಚನೆ ಪಡೆದು ಜಿಲ್ಲೆಯ ಸಮಗ್ರ ಅಭಿವೃದ್ಧಿ ರೂಪುರೇಷೆ ಸಿದ್ಧಪಡಿಸುತ್ತಾನೆ. ಆ ದಿಸೆಯಲ್ಲಿ ಅಡಿ ಇಡುತ್ತಾನೆ. ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ನಿರಂತರ ಹೋರಾಟ ಮಾಡುತ್ತಾನೆ. ಹಾಗಾಗಿ ಒಂದು ಬಾರಿ ಅವನಿಗೆ ಅವಕಾಶ ನೀಡಬೇಕು ಎಂದು ನಾನು ಬೆಳಗಾವಿ ಜನರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.

Google News Join Facebook Live 24/7 Help Desk

Tags: