ಬೆಂಗಳೂರು: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅಗತ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಮುಂಭಾಗ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಮಾತ್ರವಲ್ಲ, ಮನೆಯವರೆಲ್ಲ ಯೋಗ ಅಳವಡಿಸಿಕೊಳ್ಳಬೇಕು. ಆಗ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಮ್ಮ ದೇಶಕ್ಕೆ ಮಾತ್ರವಲ್ಲ ವಿದೇಶಕ್ಕೂ ಯೋಗ ಹಬ್ಬಿದೆ. ಯೋಗ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನವೂ ಯೋಗದಿನವಾಗಬೇಕು ಎಂದು ಯೋಗದ ಮಹತ್ವ ಸಾರಿದರು.
ಮುಂದಿನ ಪೀಳಿಗೆಗೆ ಯೋಗವನ್ನು ನಾವು ವರ್ಗಾಯಿಸಬೇಕು. ನಾವು ಆಸ್ಪತ್ರೆಗೆ ಹೋಗೋದನ್ನ ಕಡಿಮೆ ಮಾಡಬೇಕು. ಅದಕ್ಕಾಗಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತದೆ. ಗ್ರಾಮ ಗ್ರಾಮಕ್ಕೂ ಯೋಗ ವಿಸ್ತರಿಸುತ್ತೇವೆ. ಈಗಾಗಲೇ ಹಲವು ಗ್ರಾಮದಲ್ಲಿ ಯೋಗ ಗುರುಗಳಿದ್ದಾರೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕಿದೆ. ಸಿಎಂ ಮುಂಬೈಯಲ್ಲಿದ್ದಾರೆ. ಡಿಸಿಎಂಗೆ ಅನಾರೋಗ್ಯ ಅದಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ರಾಜ್ಯಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಇನ್ನು ಇದೇ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ಕೋರಿದರು. ಬಳಿಕ ಮಾತನಾಡಿದ ಅವರು, ಸಾವಿರಾರು ವರ್ಷಗಳ ಪುರಾತನ ಯೋಗ. ಮಾನವನ ಆರೋಗ್ಯಕ್ಕೆ ಮಾರ್ಗ ತೋರಿಸಿದ್ದು ಯೋಗ. ಮನಸ್ಸು, ಶರೀರದ ಏಕತೆಗೆ ಯೋಗ ಮುಖ್ಯ. ಇಂದು ವಿಶ್ವ ಸ್ಪರ್ಧೆಗೆ ಬಿದ್ದಿದೆ. ಇದರಿಂದ ಮಾನಸಿಕ ಮತ್ತು ಶರೀರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನ ಅಂತ 12 ವರ್ಷಗಳ ಹಿಂದೆ ಘೋಷಣೆ ಮಾಡಿದರು. ಯುವಕರು ಪ್ರತಿದಿನ ಯೋಗಕ್ಕೆ ಸಮಯ ಮೀಸಲು ಇಡಬೇಕು. ಉತ್ತಮ ಆರೋಗ್ಯಕ್ಕಾಗಿ ಯೋಗ ಎಂಬ ಘೋಷಣೆ ಅನ್ವಯ ಯೋಗ ದಿನ ಆಚರಿಸಲಾಗುತ್ತದೆ. ಯೋಗವನ್ನ ಜೀವನದ ಅಂಗವಾಗಿ ಮಾಡಿಕೊಳ್ಳಬೇಕಾಗಿದೆ.ಈ ಕುರಿತು ಕರ್ನಾಟಕ ಸರ್ಕಾರ ಯೋಗದ ಪ್ರಚಾರ ಹಾಗೂ ಜಾಗೃತಿ ಮೂಡಿಸುತ್ತಿದೆ ಎಂದು ನುಡಿದರು.



