ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ಸಲೀಂ ಅಹಮದ್ ಅವರನ್ನ ಆಯ್ಕೆ ಮಾಡಲಾಯಿತು.
ಆರಂಭದಲ್ಲಿ ಬಿ.ಕೆ ಹರಿಪ್ರಸಾದ್ ಅವರು ಸಲೀಂ ಅಹಮದ್ ಅವರ ಹೆಸರನ್ನು ಸಭಾಪತಿ ಸ್ಥಾನಕ್ಕೆ ಪ್ರಸ್ತಾಪ ಮಾಡಿದರು. ಈ ಮಧ್ಯೆ ಪೂಜಾರ್ ಪರವಾಗಿ ಛಲವಾದಿ ನಾರಾಯಣಸ್ವಾಮಿ ಪ್ರಸ್ತಾಪ ಮಂಡನೆಮಾಡಿದರು. ಭೋಜೇಗೌಡರು ಹಾಗೂ ಸಂಕನೂರು, ಹನುಮಂತ ನಿರಾಣಿ ಅವರು ಪೂಜಾರ್ ಹೆಸರು ಅನುಮೋದಿಸಿದರು. ಆದ್ರೆ ಚುನಾವಣೆಯಲ್ಲಿ ಅಂತಿಮವಾಗಿ ಸಲೀಂ ಅಹಮದ್ ಅವರನ್ನ ಆಯ್ಕೆ ಮಾಡಲಾಯಿತು.
ಸಂಪ್ರದಾಯದಂತೆ ವಿಪಕ್ಷ ನಾಯಕರು ಹಾಗೂ ಸಭಾ ನಾಯಕ ಸಲೀಂ ಅಹಮದ್ ಅವರನ್ನ ಸಭಾಪತಿ ಪೀಠದತ್ತ ಕರೆತಂದು ಕೂರಿಸಿದರು. ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಸಲೀಂ ಅಹ್ಮದ್ ಎಲ್ಲರಿಗೂ ಧನ್ಯವಾದ ಹೇಳಿದರು.
ಸಲೀಂ ಅಹ್ಮದ್ ಸುದೀರ್ಘ ಭಾಷಣ
ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಸಲೀಂ ಅಹ್ಮದ್ ಎಲ್ಲರಿಗೂ ಧನ್ಯವಾದ ಹೇಳಿ ಸುದೀರ್ಘ ಭಾಷಣ ಮಾಡಿದರು.
ʻನನ್ನನ್ನು ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದಂತಹ AICC ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ, ನಮ್ಮ ಅಧಿನಾಯಕಿ ಸೋನಿಯಾ ಗಾಂಧಿ, ನಮ್ಮ ನಾಯಕರು ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ, AICC ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ಸುರ್ಜೇವಾಲಾ ರವರಿಗೆ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರಿಗೆ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹಾಗೂ KPCC ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಧನ್ಯವಾದಗಳನ್ನ ಅರ್ಪಿಸುತ್ತೇನೆ.
ಅದೇ ರೀತಿ ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ಅವರ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ವೀರೇಂದ್ರ ಪಾಟೀಲರು, ಹಾಗೂ ದಿವಂಗ ಆಸ್ಕರ್ ಫನಾರ್ಂಡಿಸ್ ಅವರಂತಹ ಹಿರಿಯ ನಾಯಕರ ಸ್ಪೂರ್ತಿ-ಮಾರ್ಗದರ್ಶನ ನ ರಾಜಕೀಯ ಬದುಕಿಗೆ ಸದಾ ದಾರಿದೀಪವಾಗಿದೆ. ನನ್ನ ಸಾರ್ವಜನಿಕ ಜೀವನದ ಮೊದಲ ಪ್ರೇರಣೆಯನ್ನ ನಾನು ಜೀವನದಲ್ಲಿಯೇ ಪಡೆದುಕೊಂಡೆ. ಸ್ವಾತಂತ್ರ್ಯ ಹೋರಾಟಗಾರರಾದ ನನ್ನ ತಾತ ಮುಸ್ತಫಾ ಅಹ್ಮದ್ ಅವರ ವ್ಯಕ್ತಿತ್ವ ನನ್ನ ಮೇಲೆ ಆಳವಾದ ಪ್ರಭಾವ ಬೀರಿತು. ಅದೇ ಸಂದರ್ಭದಲ್ಲಿ ದಿ. ಇಂದಿರಾ ಗಾಂಧಿಯವರ ನಾಯಕತ್ವ ನನ್ನಂತಹ ಅನೇಕ ಯುವಕರಿಗೆ ಪ್ರೇರಣೆಯಾಯಿತು.
ಬಡವರು, ದುರ್ಬಲರು ಹಾಗೂ ಸಾಮಾನ್ಯ ಜನರ ಪರವಾಗಿ ನಿಲ್ಲುವ ರಾಜಕಾರಣದ ಮಹತ್ವವನ್ನು ಅವರ ನಾಯಕತ್ವ ನಮಗೆ ತಿಳಿಸಿತು. ಅವರ ಧೈರ್ಯ ಮತ್ತು ದೇಶದ ಏಕತೆ ಹಾಗೂ ಅಖಂಡತೆಗಾಗಿ ಅವರು ಮಾಡಿದ ಸೇವೆ ನನ್ನ ರಾಜಕೀಯ ಚಿಂತನೆಯ ಮೇಲೆ ಗಾಢವಾದ ಪ್ರಭಾವ ಬೀರಿತು. ನನ್ನ ವಿದ್ಯಾರ್ಥಿ ಜೀವನದ ಕಾಲಘಟ್ಟದಲ್ಲಿ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿ ನಾಯಕನಾಗಿದ್ದ ನಾನು NSUI ಸೇರಲು ಪ್ರಮುಖ ಕಾರಣ ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ ಹರಿಪ್ರಸಾದ್ ರವರು, ತದನಂತರ ಮಾಜಿ ಪ್ರಧಾನಿಗಳಾದ ದಿವಂಗತ ರಾಜೀವ್ ಗಾಂಧಿಯವರ ನಾಯಕತ್ವ ನನ್ನ ರಾಜಕೀಯ ಪಯಣಕ್ಕೆ ಹೊಸ ದಿಕ್ಕನ್ನು ನೀಡಿತು.
ಆಧುನಿಕ ಭಾರತ ನಿರ್ಮಾಣದ ಅವರ ಕನಸು, ಯುವಕರಿಗೆ ರಾಜಕೀಯದಲ್ಲಿ ಅವಕಾಶ ನೀಡಬೇಕೆಂಬ ಅವರ ಚಿಂತನೆ ಭಾರತವನ್ನ ಹಾಗೂ ವಿಜ್ಞಾನ-ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಮೂಲಕ ಮುನ್ನಡೆಸಬೇಕೆಂಬ ಅವರ ದೂರದೃಷ್ಟಿ ನನ್ನಂತಹ ಯುವಕರಲ್ಲಿ ಹೊಸ ಭರವಸೆ ಮೂಡಿಸಿತು. ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ನನಗೆ ಅವಕಾಶ ನೀಡಿದರು. ಆ ಜವಾಬ್ದಾರಿ ದೇಶದ ವಿವಿಧ ಭಾಗಗಳ ಯುವಕರೊಂದಿಗೆ ಕೆಲಸ ಮಾಡುವ ಅವಕಾಶವನ್ನ ನೀಡಿತು. ಜೊತೆಗೆ ಕಾಂಗ್ರೆಸ್ ಪಕ್ಷದ ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಜನಪರ ರಾಜಕಾರಣವನ್ನ ಇನ್ನಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳಲು ನನಗೆ ಅವಕಾಶ ದೊರೆಯಿತು.
ಇಂದು ನಾನು ಈ ಗೌರವಾನ್ವಿತ ಸ್ಥಾನದಲ್ಲಿ ಕುಳಿತಿದ್ದರೆ, ಅದು ಕೇವಲ ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ನನ್ನನ್ನು ಬೆಳೆಸಿದ ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳ ಫಲ. ನನ್ನ ಮೇಲೆ ನಂಬಿಕೆ ಹಿರಿಯ ನಾಯಕರ ಆಶೀರ್ವಾದದ ಫಲ. ಬಹುಮುಖ್ಯವಾಗಿ, ಕಳೆದ ನಾಲ್ಕು ದಶಕಗಳಿಂದ ನನ್ನೊಂದಿಗೆ ನಿಂತಿರುವ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಅಪಾರ ಪ್ರೀತಿ ಮತ್ತು ವಿಶ್ವಾಸದ ಫಲ.
ನನ್ನನ್ನು ಪ್ರೋತ್ಸಾಹಿಸಿದವರು. ಟೀಕಿಸಿ ತಿದ್ದಿದವರು, ಅವಕಾಶ ನೀಡಿದವರು, ಕಷ್ಟದ ಸಂದರ್ಭದಲ್ಲಿ ನನ್ನ ಬೆನ್ನಿಗೆ ನಿಂತ ಪ್ರತಿಯೊಬ್ಬರೂ ನನ್ನ 45 ವರ್ಷಗಳ ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನಗೆ ಜನ್ಮ ನೀಡಿದ ತಾಯಿ ಹಾಗೂ ತಂದೆ ಅವರನ್ನು ಸ್ಮರಿಸುತ್ತಾ, ಕಳೇದ 35 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಬೆಂಬಲವಾಗಿ ನಿಂತ ನನ್ನ ಧರ್ಮ ಪತ್ನಿ ಆಸ್ಮ ಸಲೀಂ ಅಹ್ಮದ್ ರವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸಭಾಪತಿಯ ಸ್ಥಾನವು ಯಾವುದೇ ಒಂದು ಪಕ್ಷಕ್ಕೆ ಸೇರಿದ ಸ್ಥಾನವಲ್ಲ. ಇದು ಇಡೀ ಸದನದ ಸ್ಥಾನ. ಈ ಸದನದ ಪ್ರತಿಯೊಬ್ಬ ಸದಸ್ಯರೂ ನನಗೆ ಸಮಾನರು. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಪ್ರತಿಯೊಬ್ಬ ಸದಸ್ಯರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ ನೀಡುವುದು ನನ್ನ ಕರ್ತವ್ಯ. ಸದನದಲ್ಲಿ ಒಬ್ಬರ ಮಾತನ್ನು ಮತ್ತೊಬ್ಬರು ಕೇಳಬೇಕು. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಸರ್ಕಾರವನ್ನು ಪ್ರಶ್ನಿಸಬೇಕು. ಅಗತ್ಯವಿದ್ದಾಗ ಸರ್ಕಾರದ ಉತ್ತಮ ಕಾರ್ಯಗಳನ್ನು ಮೆಚ್ಚಬೇಕು. ರಚನಾತ್ಮಕ ವಿರೋಧವೂ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ.
ಸಭಾಪತಿಯಾಗಿ ನನ್ನ ಮುಂದೆ ಇರುವ ಅತ್ಯಂತ ದೊಡ್ಡ ಜವಾಬ್ದಾರಿ ಈ ಸದನದ ಘನತೆಯನ್ನು ಕಾಪಾಡುವುದು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಆದರೆ ಅದೇ ಸಂದರ್ಭದಲ್ಲಿ ಪ್ರತಿಯೊಬ್ಬ ಸದಸ್ಯರ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಗೌರವ ನೀಡುವುದು. ಈ ಸದನದ ಗೌರವವನ್ನು ಕಾಪಾಡಲು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು, ಪ್ರಜಾಪ್ರಭುತ್ವದ ಮೌಲ್ಯಗಳನ್ನ ರಕ್ಷಿಸಲು ಕರ್ನಾಟಕದ ಜನರ ಆಶೋತ್ತರಗಳಿಗೆ ಈ ಸದನವನ್ನು ಇನ್ನಷ್ಟು ಪರಿಣಾಮಕಾರಿ ವೇದಿಕೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರ ಸಹಕಾರವನ್ನು ಕೋರುತ್ತೇನೆ.
ನನ್ನನ್ನ ಅವಿರೋಧವಾಗಿ ಆಯ್ಕೆ ಮಾಡ್ತೀರಾ ಅಂತ ಭಾವಿಸಿದ್ದೆ. ಆದರೆ ಅದು ಆಗಿಲ್ಲ ಅನ್ನೋ ನೋವಿದೆ. ನಾನು ಎಲ್ಲರನ್ನು ಒಟ್ಟಾಗಿ ನೋಡುತ್ತೇನೆ. ಸದನ ನಡೆಸಲು ಎಲ್ಲರೂ ಬೆಂಬಲ ಕೊಡಬೇಕು. ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡೋಣ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ನಾವೆಲ್ಲರು ಸೇರಿ ರಾಜ್ಯ ಕಟ್ಟೋಣ. ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡೋಣ, ನಮ್ಮನ್ನ ನಾವು ನಿಯಂತ್ರಣ ಮಾಡೋಣ. ಬೆಲ್ ಹೊಡೆದ ತಕ್ಷಣ ಮಾತು ನಿಲ್ಲಿಸಿ. ಸಿಎಂಗೆ ಮನವಿ ಮಾಡ್ತೀನಿ ಅಧಿಕಾರಿಗಳು, ಸಚಿವರು ಸದನದಲ್ಲಿ ಬರುವಂತೆ ಸೂಚನೆ ನೀಡಬೇಕು ಎಂದು ಹೇಳಿದರು.

