ವಿಜಯಪುರ: ಭೀಮಾತೀರದಲ್ಲಿ ಹತ್ಯಾಕಾಂಡ ಪ್ರಕರಣ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರು ಜನ ಹತ್ಯೆಯಾದ ಗೋವಿಂದಪುರದ ಜಮೀನಿಗೆ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶುಕ್ರವಾರ (ಮೇ 29) ಮಧ್ಯಾಹ್ನ 2:30ರ ಸುಮಾರಿಗೆ ಜಮೀನಿನಲ್ಲಿ ಕೆಲವರು ಕೆಲಸ ಮಾಡುತ್ತಿರುವ ಸಮಯದಲ್ಲಿ ಅನೇಕ ಜನ ಬಂದು ಅವರ ಮೇಲೆ ಚಾಕು, ಮಚ್ಚು ಹಾಗೂ ಬೇರೆ ಬೇರೆ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಜಯಪುರ ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಮೃತರ ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆರೋಪಿಗಳ ಬಗ್ಗೆಯೂ ಕೂಡ ನಮಗೆ ಮಾಹಿತಿ ಇದೆ. ಆದಷ್ಟು ಶೀಘ್ರದಲ್ಲಿ ಅವರನ್ನು ಬಂಧಿಸುತ್ತೇವೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.



