ಧಾರವಾಡ: ಕೆರೆಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಭಾನಿ ಬಾಬೊಜಿಕೊಪ್ಪ (12), ಮೆಹಬೂಬ ಒಟ್ನಾಳ (16), ಅನ್ವರ್ ಒಟ್ನಾಳ (14) ಸಾವನ್ನಪ್ಪಿದ ಬಾಲಕರು. ಮಧ್ಯಾಹ್ನ ಗ್ರಾಮದ ಪಕ್ಕದಲ್ಲಿ ಇರುವ ಕೆರೆಗೆ ಮೂವರು ಬಾಲಕರು ಈಜಲು ಹೋಗಿದ್ದರು. ಈ ವೇಳೆ ಕೆರೆಯ ಮಧ್ಯಭಾಗದಲ್ಲಿ ಹೋಗಿದ್ದ ಬಾಲಕರು ಈಜಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸದ್ಯ ಮೂವರು ಬಾಲಕರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



