ಬೆಂಗಳೂರು: ದೆಹಲಿಯಲ್ಲಿರುವ ಕಾಂಗ್ರೆಸ್ ಮುಖಂಡರಾದ ಖರ್ಗೆಯವರು ಮಂಗನ ಮಾದರಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಎಂಬ ಎರಡು ಬೆಕ್ಕುಗಳ ನಡುವೆ ಜಗಳ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಜಗಳ ಮಾಡಿಕೊಂಡು ಇದ್ರೆ ತಾವು ಮುಖ್ಯಮಂತ್ರಿ ಆಗಲು ಅವಕಾಶ ಸಿಗಲಿ ಎಂದು ಖರ್ಗೆಯವರು ಕಾಯುತ್ತಿದ್ದಾರೆ. ಇಲ್ಲಿ ಮುಖ್ಯಮಂತ್ರಿಯ 2 ಮುಖಗಳಿಲ್ಲ. 3 ಜನರಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ಸಿನ ಸ್ಥಿತಿ ಹದಗೆಟ್ಟಿದೆ. ಹಲವಾರು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾಳೆ ವಿಧಾನಸಭೆ ಚುನಾವಣೆ ನಡೆದರೂ ಜನರು ಕಾಂಗ್ರೆಸ್ಸನ್ನು ಸೋಲಿಸಿ ಬಿಜೆಪಿ ಸರ್ಕಾರ ಮಾಡಲು ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊರಗಡೆಯಿಂದ ಹೆಚ್ಚು ಸಾಲ ಪಡೆದುದರಿಂದ ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದೆ. ಆರೇಳು ತಿಂಗಳುಗಳಿಂದ ಇಲ್ಲಿ ಸರ್ಕಾರವೇ ಇಲ್ಲವಾಗಿದೆ. ಇವರು ಪರಸ್ಪರ ಜಗಳ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.



