ಬಾಗಲಕೋಟೆ, : ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ಬರ ಪರಿಹಾರ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸಬೇಕು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಒತ್ತಾಯಿಸಿದರು.
ಗುರುವಾರ ಬಾಗಲಕೋಟೆಯ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಇಡೀ ಸಚಿವ ಸಂಪುಟವೇ ಬಾಗಲಕೋಟೆಯಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಬರಗಾಲದ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯತ್ತ ಗಮನ ಹರಿಸುತ್ತಿಲ್ಲ. ಇದು ರೈತರ ಮೇಲಿನ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಶೇ.೪೫ರಷ್ಟು ಮಳೆ ಕೊರತೆಯಾಗಿದ್ದು, ಗ್ರಾಮೀಣ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಬಿತ್ತನೆಗೆ ಸಿದ್ಧರಾಗಿದ್ದ ರೈತರು ಮಳೆ ಕೊರತೆಯಿಂದ ಬಿತ್ತನೆ ನಡೆಸಲಾಗದೆ ಸಂಕಷ್ಟದಲ್ಲಿದ್ದಾರೆ. ಹಲವೆಡೆ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆ ಮೊಳಕೆಯೊಡೆಯದೇ ಒಣಗಿದ್ದು, ರೈತರು ಆತಂಕದಲ್ಲಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ಮಾತ್ರ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ ಆದರೆ ಅದು ಉಪಯೋಗವಿಲ್ಲ, ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಸಮಸ್ಯೆ ಗಂಭೀರವಾಗಿದೆ. ಸರ್ಕಾರ ತಕ್ಷಣ ಪರ್ಯಾಯ ಬೆಳೆ ಬೀಜ, ರಸಗೊಬ್ಬರ, ಹನಿ ನೀರಾವರಿ, ಬೆಳೆ ವಿಮೆ, ಮೇವು ಬ್ಯಾಂಕ್ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಬೇಕು. ಮೇವು ಬ್ಯಾಂಕ್ ಸ್ಥಾಪನೆ ಸೇರಿದಂತೆ ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸದೇ ಹಾಗೂ ಪ್ರಕ್ರಿಯೆಯನ್ನು ಸರಳೀಕರಿಸದೇ ಇರುವುದರಿಂದ ಅನೇಕ ರೈತರು ವಿಮೆ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ೭,೪೮೧ ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ರೈತ ಹಿತಾಸಕ್ತಿಗೆ ವಿರುದ್ಧವಾಗಿದೆ. ಪ್ರತಿಭಟನೆ ನಡೆಸಿದ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯವಾಗಿದೆ, ಉತ್ತರ ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಭೀಕರ ಬರದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಇಂತಹ ರೈತರಿಗೆ ಎಕರೆಗೆ ₹೫೦ ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದವರು,
ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಉಲ್ಬಣಗೊಂಡಿದ್ದರೂ ಪೂರ್ಣಾವಧಿಯ ಕೃಷಿ ಸಚಿವರನ್ನು ನೇಮಕ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯದ ಸಂಕೇತವಾಗಿದೆ. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲೂ ರಾಜ್ಯದ ರೈತರ ಹಿತವನ್ನು ಕಡೆಗಣಿಸಲಾಗಿದೆ. ಚುನಾವಣಾ ಭರವಸೆಯಂತೆ ಸಂಪೂರ್ಣ ಕೃಷಿ ಸಾಲಮನ್ನಾ ಜಾರಿಯಾಗಿಲ್ಲ. ಬರ ಪರಿಹಾರ ವಿತರಣೆಯಲ್ಲೂ ವಿಳಂಬವಾಗಿದ್ದು, ರೈತರಿಗೆ ಸಮರ್ಪಕ ನೆರವು ದೊರೆಯುತ್ತಿಲ್ಲ,
ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ಯೋಜನೆಯ ಹೆಚ್ಚುವರಿ ನೆರವು ಸ್ಥಗಿತಗೊಂಡಿದೆ. ಟ್ರಾನ್ಸ್ಫಾರ್ಮರ್ ದರ ಹೆಚ್ಚಳ, ವಿದ್ಯುತ್ ಕೊರತೆ, ಕೆರೆಗಳ ಹೂಳೆತ್ತುವಿಕೆ ನಿರ್ಲಕ್ಷ್ಯ, ಕೃಷಿ ಬಜೆಟ್ ಕಡಿತ, ಬೆಳೆ ವಿಮೆ ಪರಿಹಾರ ವಿಳಂಬ ಹಾಗೂ ಹಾಲು ಉತ್ಪಾದಕರಿಗೆ ಘೋಷಿಸಿದ್ದ ಹೆಚ್ಚುವರಿ ಸಹಾಯಧನ ವಿತರಿಸದಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರ ವಿಫಲವಾಗಿದೆ, ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದರೂ ಕೃಷಿ ಕ್ಷೇತ್ರಕ್ಕೆ ಅಗತ್ಯ ಆದ್ಯತೆ ನೀಡುತ್ತಿಲ್ಲ. ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ತಕ್ಷಣ ರೈತಪರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೂರನೇ ಯುನಿಟ್ ಕಾಮಗಾರಿಗಾಗಿ ಸರ್ಕಾರ ವಶಪಡಿಸಿಕೊಂಡಿರುವ ಭೂಮಿಯ ರೈತರಿಗೆ ಯಾವುದೇ ವಿಳಂಬವಿಲ್ಲದೆ ಸೂಕ್ತ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೆ, ಆಲಮಟ್ಟಿ ಜಲಾಶಯದ ಎತ್ತರ ೫೨೪.೨೫೬ ಮೀಟರ್ ಈಗಾಗಲೆ ಸಿದ್ದವಿದೆ, ಆದರೆ ಈ ಯೋಜನೆಗೆ ₹೮೦ ಸಾವಿರ ಕೋಟಿ ವೆಚ್ಚವಾಗುತ್ತದೆ ಎಂದು ಜಲಸಂಪನ್ಮೂಲ ಸಚಿವರು ಯಾವ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ಮಾಧ್ಯಮ ವಕ್ತಾರ ಸತ್ಯನಾರಾಯಣ ಹೆಮಾದ್ರಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ ಹಾಗೂ ಶ್ರೀಧರ ನಾಗರಬೇಟ್ಟ ಉಪಸ್ಥಿತರಿದ್ದರು.




