ನವದೆಹಲಿ: ರಾಜಕೀಯ ನಿವೃತ್ತಿ ಕುರಿತು ಸಾರ್ವಜನಿಕವಾಗಿ ಪದೇಪದೇ ಹೇಳಿಕೆ ನೀಡದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಹತ್ವದ ಸಲಹೆ ನೀಡಿದ್ದಾರೆ.
ದೆಹಲಿ ಭೇಟಿ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ರಾಜಕೀಯ ನಿವೃತ್ತಿ ಬಗ್ಗೆ ಸಾರ್ವಜನಿಕವಾಗಿ ಪದೇಪದೇ ಮಾತನಾಡುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುವುದರ ಜೊತೆಗೆ ಸಾರ್ವಜನಿಕ ವಲಯಕ್ಕೂ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಬಹಿರಂಗ ಹೇಳಿಕೆಗಳನ್ನು ನೀಡದಿರುವುದು ಸೂಕ್ತ ಎಂದು ರಾಹುಲ್ ಗಾಂಧಿ ಸಲಹೆ ನೀಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ರಾಹುಲ್ ಗಾಂಧಿ ಅವರ ಸಲಹೆಗೆ ಸಕಾರಾತ್ಮಕವಾಗಿ ಉತ್ತರಿಸಿದ ಸಿದ್ದರಾಮಯ್ಯ, ತಮ್ಮ ಹೇಳಿಕೆಯ ಹಿಂದಿನ ಸ್ಪಷ್ಟ ಉದ್ದೇಶವನ್ನು ವಿವರಿಸಿದ್ದಾರೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಕುರಿತಷ್ಟೇ ಮಾತನಾಡಿದ್ದೇನೆ. ವಯಸ್ಸಿನ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಚುನಾವಣಾ ಕಣಕ್ಕಿಳಿದು ಸ್ಪರ್ಧಿಸುವುದು ಕಷ್ಟವಾಗಬಹುದು ಎಂದಿದ್ದೇನೆಯೇ ಹೊರತು, ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕ ಜೀವನ, ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್‌ನ ಎಲ್ಲ ಚಟುವಟಿಕೆಗಳಲ್ಲಿ ಎಂದಿನಂತೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
