ಬೆಂಗಳೂರು: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಸರ್ಕಾರ ಹೊರಡಿಸಿರೋ ಭೂಸ್ವಾಧೀನ ಆದೇಶವನ್ನು ತಕ್ಷಣ ಕೈ ಬಿಡಬೇಕು ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯ ಆದ್ಯತೆ ರೈತರಲ್ಲ. ರಾಜ್ಯದಲ್ಲಿ ಬಡವರಿಗೆ ಮನೆ ಕಟ್ಟುವುದು ಇವರ ಆದ್ಯತೆ ಅಲ್ಲ. ರಿಯಲ್ ಎಸ್ಟೇಟ್ ಇವರ ಆದ್ಯತೆ ಎಂದು ಸಿಎಂ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ತೋರಿಸಿದ್ದಾರೆ. ಬಿಡದಿಯಲ್ಲಿ ಬಲವಂತವಾಗಿ ರೈತರಿಂದ ಸರ್ಕಾರ ಜಮೀನು ಕಸಿಯುವ ಕೆಲಸ ಮಾಡುತ್ತಿದೆ. ಬಿಡದಿಯಲ್ಲಿ ರೈತರ ಜಮೀನು ಕಸಿದುಕೊಳ್ಳುವುದನ್ನ ಬಿಜೆಪಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ರೈತರ ನೆರವಿಗೆ ಬರೋದು ಸರ್ಕಾರದ ಆದ್ಯ ಕರ್ತವ್ಯ ಆಗಬೇಕಿತ್ತು. ದುರಾದೃಷ್ಟ ಅಂದರೆ ಸಿಎಂಗೆ ಬೆಂಗಳೂರು ರಿಯಲ್ ಎಸ್ಟೇಟ್ ಆದ್ಯತೆ ಆಗಿದೆ. ಸಿಎಂಗೆ ಆಗ್ರಹ ಮಾಡ್ತೀನಿ. ಭಂಡತನ ಬಿಟ್ಟು ರೈತರ ಸಮಸ್ಯೆಗಳನ್ನ ಆಲಿಸಬೇಕು. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು. ಭೂ ಸ್ವಾಧೀನವನ್ನು ತಕ್ಷಣ ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಡದಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಪೋಸ್ಟರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮನ್ನು ಕಾಂಗ್ರೆಸ್ ಶಾಸಕರು ಎಂದು ಸಿಎಂ ಭಾವಿಸಿರುವಂತಿದೆ. ನನ್ನ ವಿರುದ್ದ ಬಿಜೆಪಿ ನಾಯಕರ ವಿರುದ್ದ ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್ ಆಂದೋಲನಕ್ಕೆ ನಾವು ಹೆದರುವುದಿಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲು ನಾವು ಕಾಂಗ್ರೆಸ್ ಶಾಸಕರಲ್ಲ. ನಾಡಿನ ರೈತರ ಪರ ನಿಲ್ಲುವ ಕರ್ತವ್ಯ ನಮ್ಮದಿದೆ. ರೈತರ ಪರ ಹೋರಾಟ ಮಾಡುವ ಜವಾಬ್ದಾರಿ ಇದೆ. ಅದನ್ನ ನಾವು ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಗ್ಯಾರಂಟಿ ಅನುಷ್ಠಾನದ ಉಪಾಧ್ಯಕ್ಷ ಕಾಂಗ್ರೆಸ್ ಎಂಎಲ್ಸಿ ಒಂದೂವರೆ ಲಕ್ಷ ಮಹಿಳೆಯರಿಗೆ ಐಟಿ ಪಾವತಿದಾರರಿಗೆ ಯಾಕೆ ಗೃಹಲಕ್ಷ್ಮಿ ಹಣ ಕೊಡಬೇಕು ಎಂದಿದ್ದಾರೆ. ಈಗ ನಿಮಗೆ ಐಟಿ ಪಾವತಿದಾರರ ನೆನಪಾಗಿದಿಯಾ? ಇಷ್ಟು ದಿನ ನಿಮ್ಮ ಗ್ಯಾರಂಟಿ ಅನುಷ್ಠಾನ ಸಮಿತಿ ಕತ್ತೆ ಕಾಯುತ್ತಿತ್ತಾ? ಇದು ನಿಮ್ಮ ಸರ್ಕಾರದ ವೈಫಲ್ಯ. ಹಣ ಕ್ರೋಢಿಕರಿಸಲು ಒಂದೊಂದಕ್ಕೇ ಕತ್ತರಿ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.




