ಹೈದರಾಬಾದ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಆರು ಬಾಲಕರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್‌ನ ಸಮೀಪದ ಪೆದ್ದ ಕಂಜರ್ಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ದತ್ತಿ ಸಂಸ್ಥೆಯೊಂದು ನಡೆಸುತ್ತಿರುವ ಹಾಸ್ಟೆಲ್‌ನಲ್ಲಿ ಈ ಬಾಲಕರು ವಾಸವಾಗಿದ್ದರು. ಗಣೇಶ ವಿಸರ್ಜನೆ ವೇಳೆ 8 ಬಾಲಕರು ಕೆರೆಗೆ ಬಿದ್ದಿದ್ದರು. ಅದರಲ್ಲಿ ಇಬ್ಬರು ಕೆರೆಯಿಂದ ಮೇಲೆ ಎದ್ದು ಬಂದಿದ್ದಾರೆ. ಇನ್ನುಳಿದ 6 ಮಂದಿ ಸಾವನ್ನಪ್ಪಿದ್ದಾರೆ.
ಈ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಬಾಲಕನಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದರು. ಆದರೆ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಆ ಕೆರೆಯು ಜನಸಂಚಾರವಿಲ್ಲದ ಏಕಾಂತ ಪ್ರದೇಶದಲ್ಲಿತ್ತು. ಬಾಲಕರನ್ನು ರಕ್ಷಿಸಲು ಪ್ರಯತ್ನಿಸಬಹುದಾದ ಯಾವುದೇ ವಯಸ್ಕರು ಅಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆರೆಯಲ್ಲಿದ್ದ ಕೆಸರು ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ತೆಲಂಗಾಣ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಹಲವು ನಾಯಕರು ಬಾಲಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ನೆರವು ನೀಡುವಂತೆ ಸಿಎಂ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
