ಸವದತ್ತಿಯಲ್ಲಿ ಕಾಂಗ್ರೆಸ್‌ ಅಬ್ಬರದ ಪ್ರಚಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಚಿವೆ‌ ಲಕ್ಷ್ಮೀ ಹೆಬ್ಬಾಳಕರ್,‌ ಶಾಸಕ ವಿಶ್ವಾಸ್ ವೈದ್ಯ ರ್ಯಾಲಿ

May 4, 2024 - 21:01
 13
Google  News Join WhatsApp Join Telegram View ePaper

ಸವದತ್ತಿಯಲ್ಲಿ ಕಾಂಗ್ರೆಸ್‌ ಅಬ್ಬರದ ಪ್ರಚಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಚಿವೆ‌ ಲಕ್ಷ್ಮೀ ಹೆಬ್ಬಾಳಕರ್,‌ ಶಾಸಕ ವಿಶ್ವಾಸ್ ವೈದ್ಯ ರ್ಯಾಲಿ

Panchayat Swaraj Samachar News Desk.

ಸವದತ್ತಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಸವದತ್ತಿ ಪಟ್ಟಣದಲ್ಲಿ ಸುಮಾರು 4 ಕಿಲೋಮೀಟರ್ ಮೆರವಣಿಗೆ ಕೈಗೊಳ್ಳುವ ಮೂಲಕ ಅಬ್ಬರದ ಪ್ರಚಾರ ಕೈಗೊಂಡರು.

ಶಾಸಕ‌ ವಿಶ್ವಾಸ್ ವೈದ್ಯ ಜೊತೆಗೂಡಿ ಕ್ಷೇತ್ರದ ವಿವಿಧೆಡೆ ಪ್ರಚಾರ ಕೈಗೊಂಡ ಬಳಿಕ ಸಂಜೆ ಸವದತ್ತಿ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಅಬ್ಬರದ ರ್ಯಾಲಿ ನಡೆಸಿದರು. ಎಪಿಎಂಸಿ ಬಳಿಯಿಂದ ಆರಂಭಗೊಂಡ ರ್ಯಾಲಿ ಹಳೇ ಬಸ್ ನಿಲ್ದಾಣ, ಆನಿ‌ ಅಗಸಿ ಮಾರ್ಗದಲ್ಲಿ ಸಾಗಿ ಗಾಂಧಿ ಚೌಕದಲ್ಲಿ ಮುಕ್ತಾಯಗೊಂಡಿತು. ಸುಮಾರು ನಾಲ್ಕು ಕಿಲೋಮೀಟರ್ ವರೆಗೂ ಸಾಗಿದ ಮೆರವಣಿಯಲ್ಲಿ‌ 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಜರಿದ್ದರು. 

 

ಈ ವೇಳೆ ಮಾತನಾಡಿದ ಸಚಿವರು, 2014ರಲ್ಲಿ ನಾನು ಸೋತ ಕ್ಷೇತ್ರದಲ್ಲೆ ಇಂದು ಗೆಲುವಿನ ವಾತಾವರಣವಿದೆ. ಸವದತ್ತಿಯಲ್ಲಿ ಸಿಕ್ಕ ಜನರ ಬೆಂಬಲವನ್ನು ನೋಡಿದರೆ ಕನಿಷ್ಟ 30 ರಿಂದ 40 ಸಾವಿರ ಮತಗಳ ಮುನ್ನಡೆ ಸಿಗುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಜಿಲ್ಲೆಗೆ ಅನ್ಯಾಯ ಎಸಗಿದ ವ್ಯಕ್ತಿ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಬಿಜೆಪಿ ದೇಶದ ಜನರಿಗೆ ಅನ್ಯಾಯ ಮಾಡಿದೆ. ಮೋದಿಯಿಂದ‌ ದೇಶ ಹಾಳಾಗುತ್ತಿದ್ದು, ಜನರು ಬದಲಾವಣೆ ಬಯಸಿದ್ದಾರೆ‌. ದಿನ ಬಳಕೆ ವಸ್ತುಗಳು ಗಗನಕ್ಕೇರಿದ್ದು, ಜನರು ಬೇಸತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿದರೆ ಶ್ರೀಮಂತರು ಶ್ರೀಮಂತರಾಗಿಯೇ ಉಳಿದಿದ್ದಾರೆ ಎಂದು‌ ಸಚಿವರು ಆರೋಪಿಸಿದರು. 

ಬಿಜೆಪಿ ಅಭ್ಯರ್ಥಿ ಶೆಟ್ಟರ್ ಸ್ವಾರ್ಥ ರಾಜಕಾರಣಿ, ಮುಖ್ಯಮಂತ್ರಿ ಆದ ನಂತರ ಸಚಿವನಾದ ಮೊದಲ ವ್ಯಕ್ತಿ. ಇಂಥ ಸ್ವಾರ್ಥ ರಾಜಕಾರಣಿ ನಮಗೆ ಬೇಡ‌. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರನ್ನು ಬೆಂಬಲಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾನೆ. ನಿಮ್ಮ ಧ್ವನಿಯಾಗಿ ದೆಹಲಿಯಲ್ಲಿ ಕೆಲಸ ಮಾಡಲಿದ್ದಾನೆ ಎಂದು‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  

ಮೃಣಾಲ್‌ ಗೆದ್ದರೆ ಸವದತ್ತಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಅನುಕೂಲ ಆಗಲಿದೆ. ಸವದತ್ತಿ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡಬೇಕು. ಮೃಣಾಲ್‌ ಹೆಬ್ಬಾಳಕರ್ ಗೆಲುವಿಗೆ ಸಹಕರಿಸಬೇಕು ಎಂದು ಶಾಸಕ ವಿಶ್ವಾಸ್ ವೈದ್ಯ ಮನವಿ ಮಾಡಿದರು. 

ಇದಕ್ಕೂ ಮೊದಲು ಜಕಬಾಳ, ಕಿಟದಾಳ, ಅರಟಗಲ್, ಬೆನಕಟ್ಟಿ, ತೆಗ್ಗಿಹಾಳ ಹಾಗೂ ಬಸರಗಿ ಗ್ರಾಮಗಳಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರ ನಡೆಸಿದರು. 

ಈ ವೇಳೆ ಮಾಜಿ ಪುರಸಭೆ ಅಧ್ಯಕ್ಷ ಶೇಖರ್, ಬಿಎನ್‌ ಪ್ರಭುನವರ್, ಉಮೇಶ್ ಬಾಳಿ, ಮಹಾರಾಜ ಗೌಡರು, ಬಿಎನ್ ಹತ್ತಿಗೇರಿ, ಅಮೀರ್ ಗುರಿನಾಯ್ಕ್, ಶಿವಾನಂದ ಪಟ್ಟಣಶೆಟ್ಟಿ, ಉಮೇಶ್ ಗೌಡರು, ನಾಸೀಬ್ ಬಾಗೋಜಿಕೊಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: