ಕೊಪ್ಪಳ: ನೀಟ್ ಮರುಪರೀಕ್ಷೆ ಬರೆಯಲು ತಡವಾಗಿ ಬಂದ ಕಾರಣ ಪರೀಕ್ಷೆಗೆ(Exam Center) ಅವಕಾಶ ಸಿಗದೆ ವಿದ್ಯಾರ್ಥಿನಿಯರು ನಿರಾಸೆಯಿಂದ ಕಣ್ಣೀರಿಟ್ಟು ಮನೆಗೆ ಮರಳಿದ ಘಟನೆ ಬೆಂಗಳೂರು ಮತ್ತು ಕೊಪ್ಪಳದಲ್ಲಿ(Koppal) ನಡೆದಿದೆ.
ಬೆಂಗಳೂರಿನ ಆರ್‌ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ನಿಗದಿತ ಸಮಯದ ಬಳಿಕ ಕೇಂದ್ರಕ್ಕೆ ಬಂದ ಕಾರಣ ಅಧಿಕಾರಿಗಳು ಪ್ರವೇಶ ನಿರಾಕರಿಸಿದರು.
ಬಸ್ ಸಮಸ್ಯೆ ಹಾಗೂ ಟ್ರಾಫಿಕ್ ದಟ್ಟಣೆ ಕಾರಣದಿಂದ ತಡವಾಗಿದೆ ಎಂದು ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬಸ್ಥರು ಗೇಟ್ ಬಳಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡ ವಿದ್ಯಾರ್ಥಿನಿಯರು ನಿರಾಸೆಯಿಂದ ಹಿಂದಿರುಗಿದ್ದಾರೆ. ಇದೇ ರೀತಿ ಮತ್ತೊಂದು ಘಟನೆ ಕೊಪ್ಪಳದಲ್ಲೂ ನಡೆದಿದೆ. ಗಂಗಾವತಿ ಮೂಲದ ಪಾತಿಮಾ ಎಂಬ ವಿದ್ಯಾರ್ಥಿನಿ ನೀಟ್ ಮರುಪರೀಕ್ಷೆ ಬರೆಯಲು ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು.
ಮಧ್ಯಾಹ್ನ 1.53ಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಪಾತಿಮಾಗೆ ಪ್ರವೇಶ ನಿರಾಕರಿಸಲಾಯಿತು. ವಿದ್ಯಾರ್ಥಿನಿ ಪರೀಕ್ಷೆ ಆರಂಭವಾದ 23 ನಿಮಿಷಗಳ ನಂತರ ಕೇಂದ್ರಕ್ಕೆ ಬಂದಿರುವ ಕಾರಣ ಅಧಿಕಾರಿಗಳು ಅವಕಾಶ ನೀಡಲಿಲ್ಲ.
ಗೇಟ್ ಎದುರು ನಿಂತು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪಾತಿಮಾ ಮನವಿ ಮಾಡಿದಳು. ಪರೀಕ್ಷಾ ನಿರೀಕ್ಷಕರನ್ನು ಬೇಡಿಕೊಂಡರೂ ಯಾವುದೇ ಅವಕಾಶ ಸಿಗಲಿಲ್ಲ. ಪರೀಕ್ಷೆಗಾಗಿ ಹಲವು ತಿಂಗಳುಗಳ ಕಾಲ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿನಿ, ಕೊನೆ ಕ್ಷಣದಲ್ಲಿ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ತೆರಳಿದರು.



