ನವದೆಹಲಿ: ಬೆಂಗಳೂರಿನ ಕಲ್ಲು ಕ್ವಾರಿಯಲ್ಲಿ ಭಾರೀ ಗ್ರಾನೈಟ್ ಬಂಡೆ ಕುಸಿದು ಏಳು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ದುರಂತ ಪ್ರಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.
ಈ ಸಂಬಂಧ ಆಯೋಗವು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ಘಟನೆಯ ಕುರಿತು ಸಮಗ್ರ ವರದಿಯನ್ನು ಎರಡು ವಾರದೊಳಗೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಜು.2ರಂದು ಬೆಂಗಳೂರಿನ ಕಲ್ಲುಕ್ವಾರಿಯಲ್ಲಿ ಈ ದುರಂತ ಸಂಭವಿಸಿತ್ತು. ಭಾರೀ ಗ್ರಾನೈಟ್ ಬಂಡೆ ಏಕಾಏಕಿ ಕಾರ್ಮಿಕರ ಮೇಲೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಏಳು ಮಂದಿ ಮೃತಪಟ್ಟರೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಸಂಭವಿಸಿದ ವೇಳೆ ಸುಮಾರು 16 ಮಂದಿ ಕಾರ್ಮಿಕರು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ಕಲ್ಲು ಕ್ವಾರಿ ಮಾಲೀಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಹೆಚ್‌ಆರ್‌ಸಿ, ವರದಿಗಳಲ್ಲಿನ ಮಾಹಿತಿ ನಿಜವಾಗಿದ್ದರೆ, ಇದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಕರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಆಯೋಗವು ತನ್ನ ನೋಟಿಸ್‌ನಲ್ಲಿ ಘಟನೆಯ ಹಿನ್ನೆಲೆ, ಸುರಕ್ಷತಾ ಕ್ರಮಗಳ ಅನುಸರಣೆ, ಅಪಘಾತಕ್ಕೆ ಕಾರಣವಾದ ಅಂಶಗಳು, ಮೃತರು ಹಾಗೂ ಗಾಯಾಳುಗಳಿಗೆ ನೀಡಿರುವ ಪರಿಹಾರ ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.



