ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಜ್ಯಾತ್ಯಾತೀಯ ನಾಯಕನಾಗಿ ರಾಷ್ಟ್ರ ಮಟ್ಟದಲ್ಲಿ ಬೆಳೆದಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯನ್ನು ತುಳಿಯುವ, ಅವಹೇಳನಕಾರಿ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ದಲಿತ, ಲಿಂಗಾಯತ, ಅಹಿಂದ ವರ್ಗದ ಮುಖಂಡರು ಎಚ್ಚರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಎಲ್ಲ ಸಮುದಾಯ, ವಿವಿಧ ಸಂಘಟನೆ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಲ್ಲೇಶ ಚೌಗುಲೆ, ಮಹಾವೀರ ಮೋಹಿತೆ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸುನೀತಾ ಐಹೊಳೆ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಅವಹೇಳಕಾರಿ ಪೋಸ್ಟ್‌ಗಳನ್ನು ಹಾಕಿರುವ ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಜಯರಾಮ ರಾಸಿಂಗೆ ಅವರನ್ನು ತಕ್ಷಣವೇ ಸಂಘಟನೆಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.
ಸಚಿವ ಸತೀಶ ಜಾರಕಿಹೊಳಿ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಹಗುರವಾಗಿ ಟೀಕಿ ಟಿಪ್ಪಣೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಅವರೊಬ್ಬರು ಕೇವಲ ದಲಿತ ಸಮುದಾಯಕ್ಕೆ ಸಿಮೀತವಲ್ಲ. ಲಿಂಗಾಯತ, ಕುರುಬ ಸೇರಿ ಎಲ್ಲ ವರ್ಗದ ನಾಯಕರಾಗಿ ಬೆಳೆದಿದ್ದಾರೆ. ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ದಲಿತ ಸಮುದಾಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ವ್ಯಕ್ತಿಯನ್ನು ತೇಜ್ಯೋವದೆ ಮಾಡಲು ಪ್ರಯತ್ನಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಸತೀಶ ಜಾರಕಿಹೊಳಿ ಅವರಷ್ಟೇ ಅಲ್ಲದೆ, ಹಿಂದಿನಿಂದಲೂ ಪ್ರಭಾವಿ ದಲಿತ ನಾಯಕರನ್ನು ತುಳಿಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಸಿಂಗೆ ಹೇಳಿಕೆಯ ಹಿಂದೆ ಯಾರ ಕೈವಾಡವಿದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಯಾವ ನಾಯಕ ಎಲ್ಲಿಂದ ಬೆಳೆದು ಬಂದಿದ್ದಾರೋ, ಅಲ್ಲಿಂದಲೇ ಅವರನ್ನು ತುಳಿಯುವ ಷಡ್ಯಂತ್ರ ರೂಪಿಸಲಾಗುತ್ತಿದೆ. ಆದರೆ, ಜಾರಕಿಹೊಳಿ ಕುಟುಂಬವನ್ನು ರಾಜಕೀಯವಾಗಿ ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ತಳಮಟ್ಟದಿಂದ ಬೆಳೆದು ಬಂದಿರುವ ವ್ಯಕ್ತಿ ಎಲ್ಲವನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. ಜಾರಕಿಹೊಳಿ ರಾಜಕೀಯ ಬೆಳವಣಿಗೆ ಅಡ್ಡಿ ಆಗಬಾರದು ಎಂಬ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡು ಬರುತ್ತಿದ್ದೇವೆ. ಇಂತಹ ಕೃತ್ಯಗಳನ್ನು ಇಲ್ಲಿಗೆ ನಿಲ್ಲಿಸಿದರೆ ಒಳಿತು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಆಕ್ರೋಶ ವ್ಯಕ್ತಪಡಿಸಿದರು.
ಕೆಂಪ್ಪಣ್ಣ ಸಿರಹಟ್ಟಿ, ಮಹಾದೇವ ತಳವಾರ, ಬಾಹುಸಾಬ ಪಾಂಡರೆ, ವಿಕ್ರಂ ಕರನಿಂಗ, ಸಂಜೀವ ಕಾಂಬಳೆ, ಶಾನುರ ತಹಶೀಲ್ದಾರ ಇತರರಿದ್ದರು.




