ಬೆಂಗಳೂರು : ತಮಿಳುನಾಡಿಗೆ ನೀರು ಬಿಡುವಂತೆ CWRC ಆದೇಶಕ್ಕೆ ಜೆಡಿಎಸ್ (JDS) ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ನೀರು ಬಿಡದಂತೆ ಜೆಡಿಎಸ್ ಆಗ್ರಹ ಮಾಡಿದೆ. ನೀರು ಬಿಡದಂತೆ ಸಿಎಂಗೆ ಒತ್ತಾಯ ಮಾಡಿರೋ ಜೆಡಿಎಸ್, ಮೇಲ್ಮನವಿ ಸಲ್ಲಿಸುವಂತೆ ಆಗ್ರಹಿಸಿದೆ.
ಜೆಡಿಎಸ್ X ನಲ್ಲಿ ಹೇಳಿದ್ದೇನು?
ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ(CWRC) ನೀಡಿರುವ ಶಿಫಾರಸು ಕರ್ನಾಟಕಕ್ಕೆ ಎಸಗಿರುವ ಘೋರ ಅನ್ಯಾಯ. ಜೂನ್‌ನಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸೂಕ್ತ ಮಳೆಯಾಗದೆ, KRS ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದೆ.
ಇಂತಹ ತೀವ್ರ ಬರ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್‌ನಂತೆ 15 ದಿನಗಳಲ್ಲಿ 4 TMC ನೀರು ಹರಿಸುವುದು ಅಸಾಧ್ಯ. ಈಗಾಗಲೇ ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ, ಈಗ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಮಂಡ್ಯ ಭಾಗ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಭೀಕರ ಅಭಾವ ಎದುರಾಗಲಿದೆ.
ಕುಡಿಯುವ ನೀರಿಗೂ ಕಂಟಕ ತರುವ CWRC ನಿರ್ಧಾರವನ್ನು ಕನ್ನಡಿಗರು ಒಪ್ಪುವುದಿಲ್ಲ. ಮುಖ್ಯಮಂತ್ರಿಗಳೇ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡಬೇಡಿ.ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ನಮ್ಮ ರೈತರನ್ನು ರಕ್ಷಿಸುವುದು ಸರ್ಕಾರದ ಮೊದಲ ಕರ್ತವ್ಯ ಆಗಬೇಕಿದೆ.
ಡಿ.ಕೆ. ಶಿವಕುಮಾರ್ ಅವರೇ, ಯಾವುದೇ ಒತ್ತಡಕ್ಕೆ ಮಣಿಯದೆ ಸಮಿತಿ ಶಿಫಾರಸಿನ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಬಲವಾಗಿ ಮೇಲ್ಮನವಿ ಸಲ್ಲಿಸಿ.ಜೊತೆಗೆ ತಮಿಳುನಾಡು ಸಿಎಂ ವಿಜಯ್ ಅವರಿಗೂ, ಕರುನಾಡಿನ ಬರ ಪರಿಸ್ಥಿತಿ ಮತ್ತು ಜಲಾಶಯಗಳ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಿ.
ನಾಡಿನ ರೈತರು ಮತ್ತು ಜನತೆಯ ಹಿತ ಕಾಯಲು ಕಾಂಗ್ರೆಸ್ ಸರ್ಕಾರ ತಕ್ಷಣವೇ ಗಟ್ಟಿಯಾದ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ.




