ತುಮಕೂರು: ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಪಾವಗಡ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು
ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸಿ, ಮೃತರ ಆತ್ಮಕ್ಕೆ ಸದ್ಗತಿ ಕೋರಿ, ಶಾಸಕ ಹೆಚ್.ವಿ.ವೆಂಕಟೇಶ್ ಮತ್ತು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವೆಂಕಟರಮಣಪ್ಪ ಅಗಲಿಕೆಯು ಅತ್ಯಂತ ನೋವಿನ ವಿಚಾರ. ಸರಳ ವ್ಯಕ್ತಿತ್ವದಿಂದ ಜನಪರ ಕೆಲಸ ಮಾಡಿ ಹೆಸರುಗಳಿಸಿದ ವ್ಯಕ್ತಿ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಭಗವಂತನು ಕುಟುಂಬ ವರ್ಗದವರಿಗೆ ನಷ್ಟವನ್ನು ಭರಿಸುವ ಶಕ್ತಿ ನೀಡಲಿ ಎಂದರು.
ವೆಂಕಟರಮಣಪ್ಪ ಅವರು ತುಮಕೂರು ಜಿಲ್ಲೆಯಲ್ಲಿ ಹೋರಾಟ ಮಾಡಿ, ಜನಪ್ರಿಯತೆ ಗಳಿಸಿದ್ದ ಶೋಷಿತ ವರ್ಗದ ನಾಯಕ. ಸಚಿವರಾಗಿದ್ದ ವೇಳೆ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್ ಪಾವಗಡ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ವೆಂಕಟರಮಣಪ್ಪ ಅವರನ್ನು ಶಾಸಕ ಅಂತ ಜನ ಕರೆಯುತ್ತಿದ್ದರು. ಪಾವಗಡದಲ್ಲಿ ಅಷ್ಟೊಂದು ಜನಪ್ರಿಯ ವ್ಯಕ್ತಿ. ನನಗೂ ಸಹ ಆತ್ಮೀಯರಾಗಿದ್ದರು. ಅವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.



