ನವದೆಹಲಿ: ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್( ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಜಾರ್ಖಂಡ್ ಹೈಕೋರ್ಟ್ ಮೇವು ಹಗರಣದಲ್ಲಿ ಲಾಲೂ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಪೀಠ, ಜಾಮೀನು ನೀಡಿ ಈಗಾಗಲೇ ಹಲವು ವರ್ಷಗಳು ಕಳೆದಿರುವುದರಿಂದ ಈಗಿರುವ ವ್ಯವಸ್ಥೆಯನ್ನು ಬದಲಾಯಿಸಲು ನಾವು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕ್ರಿಮಿನಲ್ ಮೇಲ್ಮನವಿಗಳು 2018 ರಿಂದಲೇ ಬಾಕಿ ಉಳಿದಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಈ ಹಂತದಲ್ಲಿ ಜಾಮೀನು ರದ್ದುಪಡಿಸುವ ಬದಲು, ಮುಂದಿನ 6 ತಿಂಗಳ ಒಳಗಾಗಿ ಲಾಲೂ ಅವರ ಮೇಲ್ಮನವಿ ಅರ್ಜಿಯನ್ನು ಇತ್ಯರ್ಥಪಡಿಸುವಂತೆ ಜಾರ್ಖಂಡ್ ಹೈಕೋರ್ಟ್‌ಗೆ ಸೂಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಶಿಕ್ಷೆಗಳು ಒಂದರ ನಂತರ ಮತ್ತೊಂದು ಜಾರಿಯಾಗುವ ನಿಯಮಗಳು ಅಂತಿಮ ತೀರ್ಪಿನ ಹಂತಕ್ಕೆ ಮಾತ್ರ ಅನ್ವಯಿಸುತ್ತವೆ. ಮಧ್ಯಂತರವಾಗಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವಾಗ ಅಲ್ಲ ಎಂದು ವಾದಿಸಿದರು.
ಏನಿದು ಮೇವು ಹಗರಣ?
1992 ರಿಂದ 1995ರ ಅವಧಿಯಲ್ಲಿ ಅವಿಭಜಿತ ಬಿಹಾರದಲ್ಲಿ ಮೇವು, ಔಷಧ ಹಾಗೂ ಕೃಷಿ ಉಪಕರಣಗಳ ನಕಲಿ ಬಿಲ್ ಸೃಷ್ಟಿಸಿ ಖಜಾನೆಯಿಂದ ಸುಮಾರು 950 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಡ್ರಾ ಮಾಡಲಾಗಿತ್ತು. ಈ ಸಂಬಂಧ ಒಟ್ಟು 55 ಪ್ರಕರಣಗಳು ದಾಖಲಾಗಿದ್ದವು. ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರು ಚೈಬಾಸಾ, ದಿಯೋಘರ್, ಡುಮ್ಕಾ ಮತ್ತು ಡೊರಾಂಡಾ ಖಜಾನೆ ವಂಚನೆಗೆ ಸಂಬಂಧಿಸಿದ 5 ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿದೆ. ಸದ್ಯ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಲಾಲೂ ಅವರಿಗೆ ಜೈಲು ಶಿಕ್ಷೆಯಿಂದ ತಾತ್ಕಾಲಿಕವಾಗಿ ರಿಲಿಫ್ ಸಿಕ್ಕಿದೆ.




