ಮೈಸೂರು: ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಕನ್ನಡ ಚಲನಚಿತ್ರ ರಂಗದ ನಟ ನಟಿಯರು ಭಾಗಿಯಾಗಲಿದ್ದಾರೆ. ಸಿಎಂ ಆಶಯದಂತೆ ಈ ಬಾರಿ ಮೆರವಣಿಗೆಯಲ್ಲಿ ನಟ ನಟಿಯರು ಸಾಗಲಿದ್ದಾರೆ.
ಜಂಬೂ ಸವಾರಿಯ ದಿನ ಅಂಬಾರಿ ಬಸ್‌ನಲ್ಲಿ ಅರಮನೆ ಆವರಣದಿಂದ ಕೆಆರ್ ಸರ್ಕಲ್‌ವರೆಗೆ ಮೆರವಣಿಗೆ ಮೂಲಕ ನಟ ನಟಿಯರು ಸಾಗಲಿದ್ದಾರೆ. ನಂತರ ಕಲಾವಿದರನ್ನು ಕೆಆರ್ ಸರ್ಕಲ್‌ನಿಂದ ಕರೆದುಕೊಂಡು ಬಂದು ಅರಮನೆ ಗ್ಯಾಲರಿಯಲ್ಲಿ ಬಿಡಲಾಗುವುದು ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.
ಆನೆಗಳ ತಾಲೀಮು ನೋಡಲು ದಿನವೂ ಜನಸಾಗರ:
ಮೈಸೂರು ದಸರಾ ಹಿನ್ನೆಲೆ ಗಜಪಡೆ ವೀಕ್ಷಣೆಗೆ ಜನಸಾಗರವೇ ಸೇರುತ್ತಿದೆ. ಗಜಪಡೆ ತಾಲೀಮು ನೋಡಲು ದಿನ ದಿನಕ್ಕೂ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳ ಬಳಿ ಸೆಲ್ಫಿ, ವೀಡಿಯೋ ಮಾಡುವ ಹುಚ್ಚಾಟವು ನಡೆದಿದೆ. ಆನೆಗಳನ್ನು ಕಣ್ಣು ತುಂಬಿಕೊಳ್ಳುವ ಜೊತೆಗೆ ಆನೆಗಳ ಜೊತೆ ಸೆಲ್ಫಿ, ವಿಡಿಯೋಗೆ ಜನ ಮುಗಿ ಬೀಳುತ್ತಿರುವುದು ಆನೆ ಮಾವುತರು ಹಾಗೂ ಕಾವಾಡಿಗಳಿಗೆ ದೊಡ್ಡ ತಲೆ ನೋವಾಗಿದೆ.
ಜನರನ್ನ ನಿಯಂತ್ರಿಸಲು ಪೊಲೀಸರು ದಿನವೂ ಹರಸಾಹಸ ಪಡುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡಲು ಬ್ಯಾರಿಕೇಡ್ ಕಟ್ಟಿದ್ದರು ಕೂಡ ಬ್ಯಾರಿಕೇಡ್ ದಾಟಿ ಆನೆಗಳ ಸಮೀಪ ಜನರು ಬರುತ್ತಿದ್ದಾರೆ. ಜಂಬೂ ಸವಾರಿ ಮೆರವಣಿಗೆಗೆ ಸೇರುವ ರೀತಿಯಲ್ಲೇ ದಿನವೂ ಜನರು ಜಮಾಯಿಸುತ್ತಿರುವುದು ಆನೆಗಳ ತಾಲೀಮಿಗೆ ತ್ರಾಸದಾಯಕವಾಗಿದೆ.
ಇನ್ನು ಮೈಸೂರು ದಸರಾ ಗಜಪಡೆಯ ತಾಲೀಮು ಅನ್ನು ನಟಿ ಅಮೂಲ್ಯ ತಮ್ಮ ಮಕ್ಕಳ ಜೊತೆ ನಿಂತು ವೀಕ್ಷಿಸಿದ್ದಾರೆ. ಜನರ ಗುಂಪಿನ ನಡುವೆಯೂ ತಮ್ಮ ಮಕ್ಕಳನ್ನು ನಿಲ್ಲಿಸಿಕೊಂಡು ಆನೆಗಳ ವೀಕ್ಷಣೆ ಮಾಡಿದ್ದಾರೆ.
