ಚಿಕ್ಕೋಡಿ: ಕೆರೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆದ ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಪಿಡಿಒ ಮತ್ತು ಅವರ ಸಹವರ್ತಿಗಳಿಂದ ಗಜೇಂದ್ರ ಗಸ್ತಿ ಮತ್ತು ಅನಿಲ್ ದಾನೆ ಎನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗಂಗಾಧರ್ ಆರ್ ದೊಡ್ಮನಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ ಅವರು ಅವ್ಯವಹಾರ ಪ್ರಶ್ನಿಸಿದ್ದಕ್ಕೆ ಪಿಡಿಒ ಮತ್ತು ಅವರ ಹಿಂಬಾಲಕರು ಗುಂಡಾ ವರ್ತನೆ ತೋರಿದ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಘಟನೆಯ ವಿವರ: ಜನವರಿ 4ರಂದು ಮಧ್ಯಾಹ್ನ 4:00 ಸುಮಾರು ಕೆರೂರು ಗ್ರಾಮ ಪಂಚಾಯತಿ ಕಚೇರಿಗೆ ನರೇಗಾ ಯೋಜನೆಯಲ್ಲಿ ತಮ್ಮ ಬಗ್ಗೆ ಏನೋ ಒಂದು ಸಮಸ್ಯೆ ಇದೆ ಎಂದು ಅದನ್ನು ಬಗೆಹರಿಸುವ ಸಲುವಾಗಿ ಗಜೇಂದ್ರ ಗಸ್ತಿ ಮತ್ತು ಅನಿಲ ದಾನೆ ಇವರಿಬ್ಬರನ್ನು ಗ್ರಾಮ ಪಂಚಾಯತಿ ಕಾರ್ಯಾಲಯಗೆ ಕರೆಸಿಕೊಂಡು ಪಿಡಿಒ ಮಾರಣಾಂತಿಕ ಹಲ್ಲೆ ನಡೆಸುತ್ತಾರೆ. ಪಂಚಾಯತಿ ಕಾರ್ಯಾಲಯ ಒಳಗಡೆ ಹಾಗೂ ಪಂಚಾಯಿತಿ ಕಾರ್ಯಾಲಯದ ಅಂಗಳದಲ್ಲಿ ಹಲ್ಲೆ ನಡೆಸಲಾಗಿದೆ.
ಹಲ್ಲೆ ನಡೆಯುವ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಲು ಕರೆ ಮಾಡಿದರೆ ಅಲ್ಲಿ ಅಡೆತಡೆ ಉಂಟು ಮಾಡಿದ್ದಾರೆ. ನಂತರ ಹಲ್ಲೆಗೊಳಗಾದ ಅವರಿಂದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸ್ ಠಾಣೆ ಹೊರಗಡೆ ಕೂಡ ಹಲ್ಲೆ ಮಾಡಲು ಪ್ರಯತ್ನಪಟ್ಟಿದ್ದಾರೆಂದು ಗಂಗಾಧರ್ ಆರ್ ದೊಡ್ಮನಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಹಲ್ಲೆ ಮಾಡಿದವರ ಮೇಲೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಸಂಬಂಧಿಕರು ಹಾಗೂ ಇತರರು ಉಪಸ್ಥಿತರಿದ್ದರು