ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿಯು ಜನೇವರಿ 12 ಹಾಗೂ 13 ರಂದು ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಆಚರಿಸಲಾಗುವುದು ಎಂದು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಯಣ್ಣನ ಇತಿಹಾಸವನ್ನು ವಿಶ್ವಕ್ಕೆ ತಿಳಿಸುವ ಕಾರ್ಯವನ್ನು ಸರಕಾರದಿಂದ ಮಾಡಲಾಗುತ್ತಿದೆ. ಜನೇವರಿ 12 ಹಾಗೂ 13 ರಂದು ಎರಡು ದಿನಗಳ ಕಾಲ ಜರುಗಲಿರುವ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಭಾಗಿಯಾಗುವುದರ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಉತ್ಸವದ ಮೆರವಣಿಗೆಯಲ್ಲಿ ಉತ್ತಮ ಜಾನಪದ ಕಲಾತಂಡಗಳನ್ನು ಆಯ್ಕೆ ಮಾಡಲಾಗುವದು. ಅಲ್ಲದೇ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಿ ಉತ್ತಮ ಕುಸ್ತಿ ಪಟುಗಳನ್ನು ಆಹ್ವಾನಿಸಲಾಗುವದು ಎಂದರು.
ರಾಯಣ್ಣನ ಉತ್ಸವ ಗ್ರಾಮಸ್ಥರ ಉತ್ಸವವಾಗಿದ್ದು, ಗ್ರಾಮಸ್ಥರೆಲ್ಲರೂ ಸೇರಿ ಉತ್ಸವ ಯಶಸ್ವಿಗೊಳಿಸಬೇಕು. ಅಲ್ಲದೇ ಉತ್ಸವದ ದಿನಗಳಂದು ಆಯೋಜಿಸಲಾಗುವ ವಿಚಾರ ಸಂಕೀರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಎರಡು ದಿನಗಳ ಕಾಲ ಜರುಗಲಿರುವ ರಾಯಣ್ಣನ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುವದು. ಈ ಉತ್ಸವ ಯಶಸ್ವಿಯಾಗಬೇಕಾದರೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಕುರಿತು ಉತ್ಸವಗಳನ್ನು ಆಯೊಜಿಸಲಾಗುತ್ತಿದೆ. ಸಂಗೋಳ್ಳಿ ರಾಯಣ್ಣನ ಉತ್ಸವದ ಯಶಸ್ವಿಗಾಗಿ 13 ಉಪ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಅಧಿಕಾರಿಗಳ ಜೊತೆ ಗ್ರಾಮಸ್ಥರನ್ನು ಸದಸ್ಯರನ್ನಾಗಿ ನೇಮಿಸಲಾಗುವದು. ಈ ಸಮಿತಿಗಳ ಸಭೆಯಲ್ಲಿ ಸಂಗೋಳ್ಳಿ ಹಾಗೂ ರಾಯಣ್ಣನ ಇತಿಹಾಸವನ್ನು ಪರಿಣಾಮಕಾರಿಯಾಗಿ ಪಸರಿಸುವಂತಹ ಸಲಹೆಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.
ಸಭೆಯಲ್ಲಿ ಕಿತ್ತೂರ ಶಾಸಕರಾದ ಬಾಬಸಾಹೇಬ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ರೂಪಾ ಸುರೇಶ ಚಚಡಿ, ಗ್ರಾಮ ಪಂಚಾಯತ ಸದಸ್ಯರು, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ, ಬೈಲಹೊಂಗಲ ಡಿ.ವೈ.ಎಸ್.ಪಿ ರವಿ ನಾಯಕ, ಲೊಕೊಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸೊಬರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಹಾಗೂ ಕಿತ್ತೂರಿನ ತಹಶೀಲ್ದಾರರು, ಕಾರ್ಯನಿರ್ವಾಹ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಉತ್ಸವದ ಪ್ರಯುಕ್ತ ಡೊಳ್ಳಿನ ಪದಗಳ ಆಯೋಜನೆ. ದ್ವಾರ ಬಾಗಿಲು ಸೇರಿದಂತೆ ಸಂಗೋಳ್ಳಿ ಗ್ರಾಮವನ್ನು ದೀಪಾಲಂಕಾರದಿಂದ ಅಲಂಕರಿಸಬೇಕು.
ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಗಳನ್ನು ಆಯೋಜಿಸಬೇಕು. ಸಾಯಂಕಾಲ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಡರಾತ್ರಿಯವರೆಗೆ ಜರುಗಿಸಲು ಮನವಿ ಮಾಡಿದರು.
ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾ ತಂಡಗಳು ಕೊನೆಯವರೆಗೂ ಮೆರವಣಿಗೆ ಜೊತೆ ಸಾಗಬೇಕು. ರಾಯಣ್ಣನ ಜ್ಯೋತಿ ಜಿಲ್ಲಾದ್ಯಂತ ಸಂಚರಿಸಬೇಕು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಸೇರಿದಂತೆ ಅನೇಕ ಸಲಹೆಗಳನ್ನು ಸಭೆಗೆ ನೀಡಿದರು.