ಚಿಕ್ಕಬಳ್ಳಾಪುರ: ಖರ್ಗೆ ನಂತರ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರೇ ಆಗಬಹುದು ಎಂದು ಶಾಸಕ ಶಿವಲಿಂಗೇಗೌಡ ಅವರು ಭವಿಷ್ಯ ನುಡಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಿಂದ ದೂರ ಆಗುತ್ತೇನೆ ಎಂದು ಹೇಳಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದರೆ, ರಾಜ್ಯ ಸಭೆಗೆ ಆಯ್ಕೆ ಮಾಡುತ್ತಾರೆ. ಖರ್ಗೆ ಬಿಟ್ಟ ಮೇಲೆ ಅವರು ವಿರೋಧ ಪಕ್ಷದ ನಾಯಕರೇ ಆಗಬಹುದು. ಒಂದು ದೊಡ್ಡ ಸ್ಥಾನಕ್ಕೆ ಹೋಗಬಹುದು ಎಂದರು.
ಚುನಾವಣೆ ಬೇಡ ಎಂದು ಹೇಳಿದ್ದಾರೆ. ಸಕ್ರಿಯ ರಾಜಕಾರಣದಿಂದ ದೂರ ಇರುತ್ತೇನೆ ಎಂದು ಅವರು ಹೇಳಿಲ್ಲ. ದೇಶದ ರಾಜಕಾರಣಕ್ಕೆ ಹೋಗಬಹುದು, ಅಥವಾ 2028 ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಕೆಲಸ ಮಾಡಬಹುದು. ಅವರಿಗೆ ಇನ್ನೊಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕೇಳುತ್ತೇವೆ ಹೇಳಿದರು.
ನಾನು ದೆಹಲಿಗೆ ಪ್ರಯಾಣ ಬೆಳಸುತ್ತಿದ್ದೇನೆ. ಅನಿವಾರ್ಯ ಕಾರಣದಿಂದ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿದೆ. ಇನ್ನು ಎರಡು ಮೂರು ದಿನದಲ್ಲಿ ವಿಸ್ತರಣೆ ಆಗುತ್ತದೆ ಎಂಬ ವಿಶ್ವಾಸವಿದೆ. ಹಾಗಾಗಿ ನಾನು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದೇನೆ. ಎಲ್ಲರೂ ಸಚಿವ ಸ್ಥಾನಕ್ಕೆ ಪ್ರಯತ್ನಪಡುತ್ತಾರೆ. ಪಕ್ಷದ ವರಿಷ್ಠರು ಯಾವ ಜಿಲ್ಲೆಗೆ ಕೊಡಬೇಕು ಎಂದು ತೀರ್ಮಾನ ಮಾಡುತ್ತಾರೆ. ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಆದರೆ ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದರು.




