ಕಲಬುರ್ಗಿ: ನಾವು ಸುಮ್ಮನೇ ಕುಳಿತರೂ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಮನೆಯಲ್ಲಿ ಕೂರುವುದು ಗ್ಯಾರಂಟಿ ಎಂದು ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಕೂರುವುದು ಗ್ಯಾರಂಟಿ. ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಯಾರೆಂದೇ ಗೊತ್ತಿಲ್ಲ. ಹಾಗಾಗಿ ಸಿದ್ದರಾಮಯ್ಯ ಹತಾಶರಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.
ಇದೇ ವೇಳೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಹಿಂದಿನ ಅಧಿವೇಶನದಲ್ಲಿ ಕೆಲ ಶಾಸಕರು ಅಧಿವೇಶನಕ್ಕೆ ಗೈರಾದ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನಾನಂತು ಸಂತೋಷದಿಂದ ಅಧಿವೇಶನದಲ್ಲಿ ಭಾಗಿಯಾಗುತ್ತೇನೆ. ಮಂತ್ರಿ ಮಾಡಿಲ್ಲ ಎಂದು ಮುನಿಸಿಕೊಂಡು ಕೂರೋದು ಶೋಭೆಯಲ್ಲ. ಇನ್ನು ಸಿಎಂ ಬದಲಾವಣೆ ಮಾಡುವುದು ಹೈಕಮಾಂಡ್ ಗೆ ಬಿಟ್ಟದ್ದು ಎಂದು ಹೇಳಿದರು.