ಬೆಂಗಳೂರು: ವೀರಶೈವ ಲಿಂಗಾಯತ ಸಮಾಜ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿರುವ ಸಮಾಜ. ಈ ಸಮುದಾಯದಲ್ಲಿ ಹುಟ್ಟಿದ್ದೆ ನನ್ನ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಲಿಂಗಾಯತ ಸಮಾಜ ಸರ್ವರಲ್ಲೂ ಸದಾಶಯವನ್ನೇ ಬಯಸುತ್ತದೆ. ಬಸವಣ್ಣನವರು ಕಂಡ ಕನಸಿಗೆ ಪೂರಕವಾಗಿ ನಡೆಯುತ್ತಿದೆ. ಈ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ನಮ್ಮ ಸಮಾಜ ಬೇರೆ ಸಮಾಜಕ್ಕೆ ಗೌರವ ಕೊಡುತ್ತಾ ಬಂದಿದೆ. ವೀರಶೈವ ಲಿಂಗಾಯತ ಸಮಾಜದವರು ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಕಡಿಮೆ ಇದ್ದೇವಿ. ಆದರೂ ಅಲ್ಲಿನ ಜನ ಬಹುದೊಡ್ಡ ಅಂತರದಿಂದ ನನ್ನನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ನಮ್ಮ ಸಮಾಜ ನೀಡಿರುವ ಸಂಸ್ಕೃತಿಯೇ ಕಾರಣ. ನಮ್ಮ ಸಂಸ್ಕೃತಿ ನನ್ನನ್ನು ಈ ಮಟ್ಟಿಗೆ ಬೆಳೆಸಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಸಚಿವನಾಗಿ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಉತ್ತಮ ಹೆಸರು ತರುವಂತ ಕೆಲಸ ಮಾಡುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ನೂತನ ಶಾಸಕರುಗಳನ್ನು ಅಭಿನಂದಿಸಲಾಯಿತು. ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯ ವಹಿಸಿದ್ದರು.