spot_img
spot_img
spot_img
18.7 C
Belagavi
Monday, September 26, 2022
spot_img

ಅಮೆರಿಕ ಮಾದರಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ : ಕೇಂದ್ರ ಸಚಿವ ಗಡ್ಕರಿ ಭರವಸೆ

spot_img
spot_img

For Breaking News Download App

ವರದಿ : ರತ್ನಾಕರ್ ಗೌಂಡಿ

ಬೆಳಗಾವಿ : ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು, ಭಾರತದ‌ ರಸ್ತೆ ಜಾಲವನ್ನು 2024 ರ ವೇಳೆಗೆ ಅಮೆರಿಕಕ್ಕೆ ಸರಿಸಮನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದೇನೆ. ಪ್ರತಿಯೊಂದು ಅಭಿವೃದ್ಧಿಯು ರಸ್ತೆ ಸಂಪರ್ಕವನ್ನು ಅವಲಂಬಿಸಿದೆ. ಆದ್ದರಿಂದ ರಸ್ತೆ ಸಂಪರ್ಕ ಜಾಲವನ್ನು ಸದೃಢಗೊಳಿಸಲು ಸರಕಾರ ಬದ್ಧವಿದೆ ಎಂದು ಹೇಳಿದರು.

ಭಾರತ ಮಾಲಾ-2 ರಲ್ಲಿ ಸೇರ್ಪಡೆ:

ಭಾರತ ಮಾಲಾ-2 ಯೋಜನೆಯಲ್ಲಿ ಈ ಭಾಗದ ಇನ್ನಷ್ಟು ಯೋಜನೆಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.ಹೊಸ ಮೇಲ್ಸೆತುವೆ ಪ್ರಸ್ತಾವವನ್ನು ಅಭಯ್ ಪಾಟೀಲ ನೀಡಿದ್ದರು. ಆದರೆ ಸ್ಥಳೀಯ ಕಾರಣಗಳಿಂದ ಅದು‌ ಸಾಧ್ಯವಾಗಿರುವುದಿಲ್ಲ. ಸ್ಥಳೀಯವಾಗಿ ಅಗತ್ಯ ಸಹಕಾರ ನೀಡಿದರೆ ಮುಂದುವರಿಸಲಾಗುವುದು ಎಂದರು.ಈ ಭಾಗದ ಸಂಸದರು, ಶಾಸಕರು ವಿವಿಧ ರಸ್ತೆಗಳ ಅಭಿವೃದ್ಧಿ ಮಾಡಲು ಹಾಗೂ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ್ದು, ಈ ಎಲ್ಲ ಪ್ರಸ್ತಾವನೆಗಳಿಗೆ‌ ತಕ್ಷಣವೇ ಮಂಜೂರಾತಿ ನೀಡಲಾಗುವುದು.

9 ಸಾವಿರ ಕಿ.ಮೀ. ಉದ್ದದ ಗ್ರೀನಫೀಲ್ಡ್ ಹಾಗೂ ಹೆದ್ದಾರಿ ಕಾರಿಡಾರ್ ಯೋಜನೆಯನ್ನು 3 ಲಕ್ಷ ಕೋಟಿಗೂ ಅಧಿಕ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಬೆಂಗಳೂರು-ಚೆನೈ ಯೋಜನೆ ಕೂಡ ಒಳಗೊಂಡಿದೆ. ದೆಹಲಿ-ಮುಂಬೈ ಹೆದ್ದಾರಿ ಯಲ್ಲಿ 120 ಕಿ.ಮೀ.‌ವೇಗದಲ್ಲಿ ವಾಹನ ಚಲಾಯಿಸಬಹುದು ಇದರಿಂದ ಎರಡು‌ ನಗರಗಳ ನಡುವಿನ ಪ್ರಯಾಣ ಅವಧಿ 12 ಗಂಟೆಯಾಗಲಿದೆ.

ಬೆಂಗಳೂರು ಟ್ರಾಫಿಕ್ ಹಾಗೂ ನಗರೀಕರಣ ಒತ್ತಡವನ್ನು ನಿಯಂತ್ರಿಸುವ ದೃಷ್ಟಿಯಿಂದ ಹೆದ್ದಾರಿಗಳ ಪಕ್ಕದಲ್ಲಿ ಭೂಸ್ವಾಧೀನ‌ ಮಾಡಿಕೊಂಡು ಸ್ಮಾರ್ಟ್ ‌ವಿಲೇಜ್ ಹಾಗೂ ಕೈಗಾರಿಕೆ ಸ್ಥಾಪಿಸುವ ಮೂಲಕ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಯೋಜನೆ ರೂಪಿಸಿದರೆ ಕೇಂದ್ರ ಸರಕಾರದ ವತಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸರಕಾರವು ಅಗತ್ಯ ರಸ್ತೆ ಯೋಜನೆಗಳಿಗೆ ಭೂಸ್ವಾಧೀನವನ್ನು ಮಾಡಿಕೊಟ್ಟರೆ ರಾಜ್ಯದಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಪುಣೆ-ಬೆಂಗಳೂರು ಹೆದ್ದಾರಿ ಅಂತರ ಕಡಿಮೆಗೊಳಿಸುವ ಯೋಜನೆ:

ಭಾರತ‌ ಮಾಲಾ-2 ಯೋಜನೆಯಲ್ಲಿರುವ ಪುಣೆ-ಬೆಂಗಳೂರು ರಸ್ತೆಯ ಈಗಿನ ಅಂತರವನ್ನು 100 ಕಿ.ಮೀ. ಕಡಿಮೆಗೊಳಿಸುವ ಯೋಜನೆ ರೂಪಿಸಲಾಗಿದೆ. ಮುಂದೆ ಇದು ಬೆಂಗಳೂರು-ಚೆನೈ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ ಎಂದು ವಿವರಿಸಿದರು.ರಾಣಿ ಬೆಳವಡಿ ಮಲ್ಲಮ್ಮ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ನಡುವಿನ ಸಂಬಂಧವ ಮರಾಠಾ-ಕನ್ನಡಿಗರ ಸಹೋದರತ್ವಕ್ಕೆ ಸಾಕ್ಷಿಯಾಗಿದೆ ಎಂದು ಗಡ್ಕರಿ ಬಣ್ಣಿಸಿದರು.

ಈ ಐದು ರಾಷ್ಟ್ರೀಯ ಹೆದ್ದಾರಿಗಳ ಶಂಕುಸ್ಥಾಪನೆಯು ಈ ಭಾಗದ ರಸ್ತೆ ಸಂಪರ್ಕಕ್ಕೆ ಅನುಕೂಲವಾಗಲಿದೆ.ಈ ರಸ್ತೆಗಳು ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ರಸ್ತೆ ಸಂಪರ್ಕವನ್ನು ಉತ್ತಮ ಪಡಿಸಲಿವೆ. ಇದರಿಂದ ಕಬ್ಬು ಸಾಗಾಣಿಕೆ ಸೇರಿದಂತೆ ಇತರೆ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು.

1.40 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ:

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ಅವರು, 2014 ರವರೆಗೆ ದೇಶದಲ್ಲಿ ಒಟ್ಟಾರೆ 91 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ನರೇಂದ್ರ ಮೋದಿಜಿ ಪ್ರಧಾನಮಂತ್ರಿಯಾದ ನಂತರದ ಕೇವಲ ಏಳು ವರ್ಷಗಳಲ್ಲಿ 1.40 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿರುವುದು ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಸಚಿವ ಜೋಶಿ ಹೇಳಿದರು.

ಅತ್ಯಂತ ಕಡಿಮೆ‌ ಕಾಲಘಟ್ಟದಲ್ಲಿ ‌ಮಹತ್ವಪೂರ್ಣ ಬದಲಾವಣೆ ಹಾಗೂ ರಸ್ತೆಗಳ ಅಭಿವೃದ್ಧಿ ಆಗಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ‌ ಹಾಗೂ ಸಚಿವ ನಿತಿನ್ ಗಡ್ಕರಿ ಅವರ ಅವಧಿಯಲ್ಲಿ ಆಗಿದೆ.ಸಚಿವ ಗಡ್ಕರಿಯವರು ಇಡೀ ದೇಶದಲ್ಲಿ ಕರ್ನಾಟಕ ರಾಜ್ಯಕ್ಕೆ ಅತೀ ಹೆಚ್ಚು ಯೋಜನೆಗಳನ್ನು ನೀಡಿದ್ದಾರೆ. ರಸ್ತೆಗಳಿಂದಲೇ‌ ದೇಶದ ಸಾಧ್ಯ ಎಂಬುದನ್ನು ಅರಿತುಕೊಂಡಿರುವ ಅವರು, ಉತ್ತಮ ರಸ್ತೆಗಳ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಎಲ್ಲಾ ರಸ್ತೆ ಅಂಡಪಾಸ್ ಗಳನ್ನು ಕೇಂದ್ರ ರಸ್ತೆ ಸಾರಿಗೆ‌ ಹಾಗೂ ಹೆದ್ದಾರಿ ಇಲಾಖೆಯ ವತಿಯಿಂದ ಮಾಡಿಕೊಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಯ ಅಂಡರ ಪಾಸ್ ನಿರ್ಮಾಣ ಸುಲಭವಾಗಲಿದೆ ಎಂದರು.

ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 42 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ. ಪಕ್ಷಾತೀತವಾಗಿ ಎಲ್ಲ ಸಂಸದರ ಪ್ರಸ್ತಾವಗಳಿಗೆ ಸಚಿವ ಗಡ್ಕರಿ ಅವರು ಮಂಜೂರಾತಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ರಾಜ್ಯಕ್ಕೆ ಇನ್ನಷ್ಟು ನೆರವು ಒದಗಿಸಲು ಮನವಿ:

ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಹಿಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದಾದ್ಯಂತ ಹೆದ್ದಾರಿಗಳನ್ನು ನಿರ್ಮಿಸುವ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಲೋಕೋಪಯೋಗಿ ಇಲಾಖೆಯ ಸಚಿವರು ಅವರ ಕನಸನ್ನು ನನಸು ಮಾಡಿದ್ದಾರೆ ಎಂದು ಹೇಳಿದರು.
ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಪ್ರತಿದಿನ 70 ಕಿ.ಮೀ. ಹೆದ್ದಾರಿ ನಿರ್ಮಾಣದ ಗುರಿಯನ್ನು ಸರಕಾರ ಹೊಂದಿದೆ.ಕರ್ನಾಟಕದ ರಾಜ್ಯದ ಹೆದ್ದಾರಿಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರವು ಇನ್ನೂ ಹೆಚ್ಚಿನ ನೆರವು ನೀಡಬೇಕು ಎಂದು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿಕೊಂಡರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಇಲಾಖೆಯ ಸಚಿವ ಗೋವಿಂದ ಕಾರಜೋಳ, ಮಾತನಾಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಕರ್ನಾಟಕ ರಾಜ್ಯದ ರಸ್ತೆ ಗಳ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವ ಮೂಲಕ ಪ್ರಗತಿಗೆ ಸಹಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ್ ಕತ್ತಿ, ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಯನ್ನು ಷಟ್ಪಥವನ್ನಾಗಿ ನಿರ್ಮಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಧಾರ್ಮಿಕ ದತ್ತಿ ಹಾಗೂ ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ, ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ಬೆಳಗಾವಿ ಸಂಸದರಾದ ಮಂಗಲ ಅಂಗಡಿ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ವಿಜಯಪುರ ಸಂಸದ ರಮೆಶ್ ಜಿಗಜಿಣಗಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡ್ರ, ಬಾಗಲಕೋಟ ಶಾಸಕ ವೀರಣ್ಣ ಚರಂತಿಮಠ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮತ್ತಿತರರು ಉಪಸ್ಥಿತರಿದ್ದರು.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -