ಬೆಳಗಾವಿ: ಸಿದ್ದರಾಮಯ್ಯನವರೇ (CM Siddaramaiah) ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿಕೆ ನೀಡಿದ್ದಾರೆ.
ದೀಪಾವಳಿ ನಂತರ ಕಾಂಗ್ರೆಸ್ (Congress) ಸರ್ಕಾರ ಪತನ ಆಗುತ್ತೆ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ (Belagavi) ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಸ್ಥಿರ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಅಸ್ಥಿರ ಮಾಡುವುದು, ಸರ್ಕಾರ ಬೀಳಿಸುವುದು, ಸರ್ಕಾರ ಒಡೆಯುವುದು, ಆಪರೇಷನ್ ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದವರಿಗೆ ಇದೇ ಕೆಲಸ ಆಗಿದೆ. ಸರ್ಕಾರ ಬೀಳಿಸುವುದೇ ಒಂದೇ ಅವರ ಕಾರ್ಯಕ್ರಮ ಆಗಿದೆ ಎಂದು ಕಿಡಿಕಾರಿದರು.
ನಾಳೆ ಸಿಎಂ ಭವಿಷ್ಯ ನಿರ್ಧಾರ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆಗುವುದಿಲ್ಲ. ಸಿಎಂ ಅವರ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಸಿಎಂ ರೇಸ್‌ನಲ್ಲಿ ಯಾರು ಇಲ್ಲ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟ ಸಿಎಂ, ಭ್ರಷ್ಟ ಸಿಎಂ ಆಕಾಂಕ್ಷಿಗಳು ಎಂದು ಪೋಸ್ಟ್ ಹಾಕಿರುವ ಕುರಿತು, ಅವರ ಸೋಷಿಯಲ್ ಮೀಡಿಯಾದಲ್ಲಿ ಏನೇನೂ ಹಾಕಿರುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ದೇಶದಲ್ಲಿ ನಂಬರ್ ಒನ್ ಅಲ್ವಾ? ಸುಳ್ಳು ಸುದ್ದಿ ಪ್ರಚೋದನೆ ಮಾಡುವುದರಲ್ಲಿ ಬಿಜೆಪಿಯವರು ದೇಶದಲ್ಲಿ ನಂಬರ್ ಒನ್ ಎಂದು ತಿರುಗೇಟು ನೀಡಿದರು.
ಕೋರ್ಟಿನಲ್ಲಿ ಯಾವುದೇ ರೀತಿ ವ್ಯತಿರಿಕ್ತವಾದ ತೀರ್ಮಾನ ಬರುವುದಿಲ್ಲ. ಕೋರ್ಟ್ನಲ್ಲಿ ರಾಜ್ಯಪಾಲರು ತನಿಖೆಗೆ ಕೊಟ್ಟಿರುವುದು ಸರಿಯೋ ಇಲ್ಲವೋ ಅಷ್ಟೇ ಇರೋದು. ಅವರು ತಪ್ಪು ಮಾಡಿದ್ದಾರೆ ಎನ್ನುವುದು ಇಲ್ಲ. ನಮ್ಮ ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅಧಿಕಾರದ ದುರುಪಯೋಗವು ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.