spot_img
spot_img
spot_img
34.1 C
Belagavi
Monday, May 29, 2023
spot_img

ಸರ್ಕಾರಿ ನೌಕರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ

ಬೆಳಗಾವಿ : ಹಳೆಯ ಪಿಂಚಣಿ ಯೋಜನೆ ಜಾರಿ ತರುವ ಪ್ರಸ್ತಾವನೆಯು ಸರ್ಕಾರದ ಮುಂದಿರುವುದಿಲ್ಲ. ಹಣಕಾಸಿನ ನೆರವು ನೋಡಿಕೊಂಡು ಒಪಿಎಸ್ ಜಾರಿ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದರು.

ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ಎನ್‍ಪಿಎಸ್ ನಿಂದ ಓಪಿಎಸ್‍ಗೆ ಪರಿವರ್ತನೆ ಕುರಿತು ಸರ್ಕಾರದ ನಿಲುವೇನು ಎಂದು ಸದಸ್ಯ ತಳವಾರ ಸಾಬಣ್ಣ ಅವರು ಕೇಳಿದ ಪ್ರಶ್ನೆಗೆ ಪರಿಷತ್ತಿನಲ್ಲಿ ಮುಖ್ಯಮಂತ್ರಿಗಳ ಪರವಾಗಿ ಮಾತನಾಡಿದ ಜೆ.ಸಿ.ಮಾಧುಸ್ವಾಮಿ ಅವರು, ಹಳೆಯ ಪಿಂಚಣ ಯೋಜನೆಯ ಜಾರಿ ಬಗ್ಗೆ ಸದ್ಯಕ್ಕೆ ಯಾವುದೇ ಆಲೋಚನೆ ಇರುವುದಿಲ್ಲ.

ಓಪಿಎಸ್ ಜಾರಿಗೆ ಪದೆಪದೇ ಒತ್ತಾಯಿಸುವುದು ಸರಿಯಲ್ಲ. ಒಪಿಎಸ್ ಜಾರಿ ಸಂಬಂಧ ಪರಿಶೀಲಿಸಲು ಈಗಾಗಲೇ ಮೂರು ಸಭೆಗಳು ನಡೆದಿವೆ. ಹೊಸ ಪಿಂಚಣ ವ್ಯಾಪ್ತಿಗೆ ಬರುವ ನೌಕರರಿಗೆ ಈಗಾಗಲೇ ಹಲವಾರು ಸೌಲಭ್ಯ ನೀಡಲಾಗಿದೆ. ಒಪಿಎಸ್ ನೀಡುವ ಅವಶ್ಯಕತೆಯಿಲ್ಲ ಎಂದು ಸಮಿತಿಯು ವರದಿ ನೀಡಿದೆ ಎಂದು ತಿಳಿಸಿದರು.

ಹಳೆಯ ಪಿಂಚಣಿ  ಯೋಜನೆಯ ಜಾರಿ ಬಗ್ಗೆ ರಾಜ್ಯ ಸರ್ಕಾರವು ಪುನರ್ ಪರಿಶೀಲಿಸಬೇಕು ಎಂಬುದು ನಮ್ಮ ಕಳಕಳೀಯ ವಿನಂತಿಯಾಗಿದೆ. ನಾವು ಸರ್ಕಾರದ ಜೊತೆಗಿದ್ದೇವೆ. ಓಪಿಎಸ್ ಜಾರಿಯ ಒತ್ತಾಯಕ್ಕೆ ತಾವು ಈಗಲೂ ಬದ್ಧರಿದ್ದೇವೆ ಎಂದು ಪ್ರಕಟಿಸುವಂತೆ ಕೋರಿ ವಿಧಾನ ಪರಿಷತ್‍ನ ಸದಸ್ಯರಾದ ಆಯನೂರ ಮಂಜುನಾಥ ಮತ್ತು ಎಸ್ ವಿ ಸಂಕನೂರ ಅವರು ಸಭಾತ್ಯಾಗ ಮಾಡಿ, ಸಾತ್ವಿಕ ಪ್ರತಿಭಟನೆ ವ್ಯಕ್ತಪಡಿಸಿದರು.

ಸದಸ್ಯರಾದ ಮರಿತಿಬ್ಬೇಗೌಡ ಅವರು ಸಹ ರಾಜ್ಯ ಸರಕಾರಿ ನೌಕರರಿಗೆ ಒಪಿಎಸ್ ಅಗತ್ಯತೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿಸಿದರು ಮತ್ತು ಸಭಾತ್ಯಾಗ ಮಾಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಸಂಕನೂರ ಅವರು ಮಾತನಾಡಿ, ಹೊಸ ಪಿಂಚಣಿ  ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ 2,97,925 ನೌಕರರ ಬೇಡಿಕೆಯನ್ನು ಸಾವಧಾನದಿಂದ, ಮಾನವೀಯತೆಯಿಂದ ಪರಿಶೀಲಿಸಬೇಕು. ನೌಕರರು ಒತ್ತಾಯದಂತೆ ಸದ್ಯಕ್ಕೆ ಒಪಿಎಸ್ ಜಾರಿಗೆ ತಾತ್ವಿಕ ಒಪ್ಪಿಗೆ ಕೊಡಬೇಕು. ಆ ಮೇಲೆ ಕಾನೂನು ತೊಡಕುಗಳನ್ನು ಸರಿಪಡಿಸಬಹುದು ಎಂದು ತಿಳಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯರಾದ ಆಯನೂರ ಮಂಜುನಾಥ ಅವರು ಮಾತನಾಡಿ, ಹೊಸ ರಾಷ್ಟ್ರೀಯ ಪಿಂಚಣಿ  ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಹೇರಲ್ಪಟ್ಟಿದೆಯೇ ವಿನಃ ಒಪ್ಪಿತವಾಗಿ ಜಾರಿಯಾದ ಯೋಜನೆಯಲ್ಲ. ನೌಕರರ ಒತ್ತಾಯದಂತೆ ಹಳೆಯ ಪಿಂಚಣ ಯೋಜನೆ ಜಾರಿ ಸಂಬಂಧ ಪರಿಶೀಲಿಸಲು ಮಾಡಿದ ಸಮಿತಿಯು ಸತ್ತ ರೀತಿಯಲ್ಲಿದೆ. ಸರ್ಕಾರವು ತಾಯಿ ಸ್ಥಾನದಲ್ಲಿದೆ. ನೌಕರರ ಬೇಡಿಕೆಯ ಬಗ್ಗೆ ತಾಳ್ಮೆಯಿಂದ ಚರ್ಚಿಸಬೇಕು. ಇದನ್ನು ಪುನರ್‍ಪರಿಶೀಲನೆ ಮಾಡಬೇಕು. ಒಪಿಎಸ್ ಜಾರಿ ಸಂಬಂಧ ಸಭೆ ನಡೆಸಿ ಅದಕ್ಕೆ ತಮ್ಮನ್ನು ಆಹ್ವಾನಿಸಿದಲ್ಲಿ ಒಪಿಎಸ್ ಜಾರಿ ಸಂಬಂಧ ಸರ್ಕಾರಕ್ಕೆ ಹೊರೆಯಾಗದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಎಂದರು.

ತಮ್ಮ ನೋವಿಗೆ ನಾವುಗಳು ದನಿಯಾಗಬೇಕು ಎಂದೇ ನೌಕರರು ನಮಗೆ ಮತ ನೀಡಿ ಆಯ್ಕೆ ಮಾಡಿ ವಿಧಾನ ಮಂಡಲಕ್ಕೆ ಕಳುಹಿಸಿದ್ದಾರೆ. ಮತ ಹಾಕಿದವರಿಗೆ ಎನ್‍ಪಿಎಸ್, ಮತ ಪಡೆದವರಿಗೆ ಒಪಿಎಸ್ ಯಾಕೆ ಎಂದು ಪ್ರಶ್ನಿಸಿದ ಆಯನೂರ ಮಂಜುನಾಥ ಅವರು, ಹಳೆಯ ಪಿಂಚಣ ಯೋಜನೆಯನ್ನು ಜಾರಿ ತರುವ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ ಎನ್ನುವುದಾದರೆ ವಿಧಾನ ಮಂಡಲದ ಸದಸ್ಯರಿಗೂ ಹೊಸ ಪಿಂಚಣಿ  ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಹೊಸ ಪಿಂಚಣ ಯೋಜನೆಯನ್ನು ರದ್ದುಪಡಿಸಬೇಕು. ನೌಕರರ ಬೇಡಿಕೆಯನ್ನು ಪುನರ್ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಸಾತ್ವಿಕ ಪ್ರತಿಭಟನೆ ಭಾಗವಾಗಿ ತಾವು ಸದನದಿಂದ ಹೊರಹೋಗುತ್ತಿರುವುದಾಗಿ ತಿಳಿಸಿದರು.

ಒಪಿಎಸ್ ಜಾರಿಯ ಒತ್ತಾಯಕ್ಕೆ ದನಿಗೂಡಿಸಿದ ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರು ಮಾತನಾಡಿ, ಒಪಿಎಸ್ ಜಾರಿಗೆ ಒತ್ತಾಯಿಸಿ ನೌಕರರು ಮನೆ, ಹೆಂಡತಿ, ಮಕ್ಕಳನ್ನು ಬಿಟ್ಟು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನೌಕರರ ಬೇಡಿಕೆಯನ್ನು ಸರ್ಕಾರವು ಸಾವಧಾನದಿಂದ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ತಾವು ಕಳಕಳಿಯಿಂದ ಮನವಿ ಮಾಡುವುದಾಗಿ ತಿಳಿಸಿದರು. ಚಳಿಗಾಲದ ಈ ಅಧಿವೇಶದನಲ್ಲಿ ಒಪಿಎಸ್ ಜಾರಿಯ ಬಗ್ಗೆ ಸರ್ಕಾರವು ಸಕಾರಾತ್ಮಕವಾದ ನಿರ್ಧಾರವನ್ನು ಸ್ಪಷ್ಟಪಡಿಸಬೇಕು ಎಂದರು.

43 ವರ್ಷಗಳಿಂದ ತಾವು ಶಿಕ್ಷಕರ, ನೌಕರರ ನೋವನ್ನು ಹತ್ತಿರದಿಂದ ನೋಡಿದ್ದೀರಿ. ಹಳೆಯ ಪಿಂಚಣಿ ಯೋಜನೆಯ ಜಾರಿಯ ವಿಷಯದ ಬಗ್ಗೆ ತಾವುಗಳು ಮೃದುಧೋರಣೆ ತಾಳಬಾರದು. ಒಪಿಎಸ್ ಜಾರಿ ಬೇಡಿಕೆಯ ವಿಷಯದ ನೇತೃತ್ವ ವಹಿಸಿ ಯೋಜನೆ ಜಾರಿಗೆ ಸಹಕರಿಸಬೇಕು ಎಂದು ಸದಸ್ಯ ಹುಕ್ಕೇರಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿದರು.

Related News

ಮಣಿಪುರದಲ್ಲಿ ಮತ್ತೆ ತಲೆ ಎತ್ತಿದ ಹಿಂಸಾಚಾರ ಪೊಲೀಸ್‌ ಸೇರಿದಂತೆ ಐವರು ಸಾವು

ಇಂಫಾಲ್‌: ಕಳೆದ ಕೆಲವು ದಿನಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್‌ ಸೇರಿದಂತೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕಳೆದ ಒಂದು...

ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ, ಊಹಾಪೋಹಗಳಿಗೆ ಕಿವಿಗೊಡಬೇಡಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಊಹಾಪೋಹಗಳಿಗೆ ಕಿವಿಗೊಡಬೇಡಿ, ಗಾಬರಿಯಾಗಬೇಡಿ ಯಾರು ಬೇಕಾದರೂ ಟೀಕೆ ಮಾಡಲಿ ಅದಕ್ಕೆ ನಾವು ಬೇಡ ಅನ್ನಲ್ಲ. ಎಲ್ಲರಿಗೂ ವಾಕ್​ ಸ್ವಾತಂತ್ರ್ಯ ಇದೆ. ಮಾತನಾಡುವವರು ನಮ್ಮನ್ನು ತಿದ್ದಲಿ, ನಾವು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -