ಬೆಳಗಾವಿ: “ಈವರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಅಭೂತಪೂರ್ವ ಅಭಿವೃದ್ಧಿ ಗಮನಿಸಿದಾಗ ಲಕ್ಷ್ಮೀ ಹೆಬ್ಬಾಳಕರರಂಥ ಶಾಸಕರನ್ನು ಕಾಂಗ್ರೆಸ್ ಗೆ ನೀಡಿದ ಕ್ಷೇತ್ರದ ಜನ ಅಭಿನಂದನೀಯರು” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಹರ್ಷಾ ಶುಗರ್ಸ್ ವತಿಯಿಂದ ಬಸ್ತವಾಡ ಗ್ರಾಮದಲ್ಲಿ ಆಯೋಜಿಸಿದ್ದ ಅರಿಷಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ವೇದಿಕೆಯಿಂದ ಶಾಸಕರ ಕಾರ್ಯಗಳ ಕುರಿತು ಜನರನ್ನೇ ಪ್ರಶ್ನಿಸಿ ಉತ್ತರ ಪಡೆದ ಅವರು, ಈವರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಕೈಗೊಂಡ ಅಭೂತಪೂರ್ವ ಅಭಿವೃದ್ಧಿ ಅವಲೋಕಿಸಿ, ಮುಂಬರುವ ಚುನಾವಣೆ ವೇಳೆಗೆ ಎಂಇಎಸ್, ಬಿಜೆಪಿ ಸ್ಥಳೀಯ ಘಟಕದವರು ಕೂಡ ಪಕ್ಷಾತೀತ ಮನೋಭಾವದೊಂದಿಗೆ ಬಹುಮತದೊಂದಿಗಿನ ಕಾಂಗ್ರೆಸ್ ಸರಕಾರ ರಚನೆಗೆ ಸಹಕರಿಸಲಿ,” ಎಂದರು.
“ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ದೇವರು ಕೊಡುವುದು ಅವಕಾಶವನ್ನು ಮಾತ್ರ. ಅದನ್ನು ಸರಿಯಾಗಿ ಉಪಯೋಗಿಸಿದಾಗ ಮಾತ್ರ ಅಭ್ಯುದಯ ಸಾಧ್ಯ ಎಂದ ಡಿ.ಕೆ. ಶಿವಕುಮಾರ್, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ತರ ಸ್ಥಾನವಿದೆ. ಯಾವುದರಲ್ಲೂ ಹೆಣ್ಣನ್ನೇ ಮೊದಲು ಪರಿಗಣಿಸಲಾಗುತ್ತದೆ. ಹೀಗಾಗಿ ಹೆಬ್ಬಾಳಕರ ಕುಟುಂಬದವರು ಕ್ಷೇತ್ರದ ಮಹಿಳೆಯರಿಗೆ ಅರಿಶಿಣ ಕುಂಕುಮ ನೀಡಿ ಶುಭ ಹಾರೈಸುವ ಧರ್ಮಕಾರ್ಯ ಮಾಡುತ್ತಿದ್ದಾರೆ. ಅವರನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು,” ಎಂದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿಕೇತ್ ರಾಜ್ ಹಾಗೂ ಸ್ಥಳೀಯ ಮುಖಂಡರು ವೇದಿಕೆಯಲ್ಲಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ಸ್ಥಳೀಯರು ಪೇಟಾ ತೊಡಿಸಿ ಸನ್ಮಾನಿಸಿದರು.ಬಸ್ತವಾಡ ಹಾಗೂ ಸುತ್ತಲಿನ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.