ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಶಾಂತಿಯುತವಾಗಿತ್ತು. ಸಂಭ್ರಮಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಸಹಕಾರ ಕೊಟ್ಟ ಜನರಿಗೂ ಧನ್ಯವಾದ ಹೇಳಿದರು.
ರಾಜ್ಯದಲ್ಲಿ ಶಾಂತಿಯುತವಾಗಿ ಹೊಸ ವರ್ಷ ಸಂಭ್ರಮಾಚರಣೆ ನಡೆದಿದೆ. ಲಕ್ಷಾಂತರ ಜನರು ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಹೀಗಿದ್ದರೂ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪೊಲೀಸ್ ಇಲಾಖೆಯೂ ಸೂಕ್ತ ಕ್ರಮ ಕೈಗೊಂಡಿತ್ತು. ಜನರೂ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲನೇ ಬಾರಿ ಯಶಸ್ವಿಯಾಗಿ ಹೊಸ ವರ್ಷ ಸಂಭ್ರಮಾಚರಣೆ ನಡೆದಿದೆ. ಯಾವುದೇ ಸಮಸ್ಯೆ ಆಗದಂತೆ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಜನರು ಪೊಲೀಸರಿಗೆ ಎಲ್ಲಾ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ಹಾಗಾಗಿ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಯುವಕರು ಎಲ್ಲಾ ಸಹಕಾರ ಕೊಟ್ಟಿದ್ದಾರೆ ಎಂದರು. ನೀವೆಲ್ಲೂ ಹೊಸವರ್ಷದ ಸಂಭ್ರಮಾಚರಣೆಗೆ ಹೋಗಿಲ್ಲವೇ? ಎಂಬ ಪ್ರಶ್ನೆಗೆ, ನಾನೂ ಹೋಗೋಕೆ ಹೊರಟಿದ್ದೆ. ಆದರೆ ನಾನೂ ಎಲ್ಲೂ ಹೋಗಿಲ್ಲ, ಮನೆಯಲ್ಲೇ ಇದ್ದೆ ಎಂದರು.
ಚಿನ್ನದಂಗಡಿ ವ್ಯಾಪಾರಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಡಿಕೆ ಸುರೇಶ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್ ಆಗಿದೆ. ಸರ್ಕಾರ ಈ ವಿಚಾರವಾಗಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಸಣ್ಣ ವಿಚಾರವಾಗಿ ಸರ್ಕಾರವನ್ನು ತರುವುದು ಸರಿಯಲ್ಲ ಎಂದರು.
ರಾಜ್ಯದ ಅಭಿವೃದ್ದಿಗೆ ಹಾಗೂ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ವಿರೋಧ ಪಕ್ಷಗಳು ಸಹಕಾರ ಕೊಡಬೇಕು. ಟೀಕೆ ಮಾಡಿ, ಆದರೆ ಸಕರಾತ್ಮಕ ಇರಲಿ. ಸರ್ಕಾರಕ್ಕೆ ಸಲಹೆ ಸೂಚನೆ ಕೊಡಲಿ ಎಂದು ಇದೇ ವೇಳೆ ಪರಮೇಶ್ವರ್ ಹೇಳಿದರು.