ಬೆಂಗಳೂರು: ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ನೀಡಿದ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡಿದ್ದಾರೆ.
ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಬಗ್ಗೆ ಸಂಪುಟ ಸಭೆಯಲ್ಲಿ ನಾವು ಚರ್ಚಿಸಿದ್ದೇವೆ. ರಾಜ್ಯಪಾಲರಿಗೆ ಸಲಹೆ ನೀಡಬೇಕೆಂದು ನಾವು ನಿರ್ಧರಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ನೀಡಿದ್ದ ನೋಟಿಸ್ ಹಿಂಪಡೆಯುವಂತೆ ಮನವಿ ಮಾಡುತ್ತೇವೆ. ಟಿ.ಜೆ.ಅಬ್ರಹಾಂ ದೂರು ರಾಜ್ಯಪಾಲರು ತಿರಸ್ಕರಿಸಬೇಕು. ಇದು ನಮ್ಮ ಸಚಿವ ಸಂಪುಟ ಸಭೆಯ ಸಲಹೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ವಾ?
ಇಷ್ಟು ತರಾತುರಿಯಲ್ಲಿ ಏಕೆ ಇಂತ ತೀರ್ಮಾನ ಮಾಡುತ್ತಾರೆ? ತನಿಖೆಯಲ್ಲಿ ಆರೋಪ ಸಾಬೀತಾದರೆ ತೀರ್ಮಾನ ಮಾಡಲಿ. ನ್ಯಾಯಾಂಗ ತನಿಖೆ ಇನ್ನು ನಡೆಯುತ್ತಿದೆ. ತನಿಖೆ ಆಗುವ ಮೊದಲೇ ತರಾತುರಿಯಲ್ಲಿ ಯಾಕೆ ಹೀಗೆ. ರಾಜ್ಯದ ಸಿಎಂಗೆ ಶೋಕಾಸ್ ನೋಟಿಸ್ ಕೊಡ್ತಾರಂದರೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಡಾದವರೇ 50:50 ನಿಯಮದಡಿ ಸೈಟ್ ಹಂಚಿದ್ದಾರೆ. ಸಿಎಂ ಪತ್ನಿ ಈ ಜಾಗದಲ್ಲೇ ಸೈಟ್ ಬೇಕು ಅಂದಿದ್ರಾ? ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಇದೆಲ್ಲಾ ನಡೆದಿದ್ದು, ಇದೆಲ್ಲಾ ನಡೆದಾಗ ಸಿದ್ದರಾಮಯ್ಯನವರು ಇಲ್ಲವೇ ಇಲ್ಲ. ಮುಡಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಲ್ಲ ಪಕ್ಷದವರಿದ್ದರು. ಎಲ್ಲ ಪಕ್ಷದವರ ನಿರ್ಧಾರದಂತೆ ನಿವೇಶನ ಹಂಚಿದ್ದಾರೆ. ಏನು ದೊಡ್ಡ ಅಪರಾಧ ಆಗಿದೆ. ಏನು ಲೂಟಿಯಾಗಿದೆ ಎಂದು ಬಿಜೆಪಿಗರಿಗೆ ಪ್ರಶ್ನೆ ಮಾಡಿದ್ದಾರೆ.
ಈ ಸೈಟ್ ಹಂಚಿಕೆ ಬಗ್ಗೆ 2 ವರ್ಷದ ಹಿಂದೆ ಬಂದಿತ್ತು. ಆಗ ಯಾಕೆ ಬಿಜೆಪಿ ನಾಯಕರು ಮಾತನಾಡಲಿಲ್ಲ. ಜನ ಆಶೀರ್ವದಿಸಿದ ಸರ್ಕಾರ ತೆಗೆಯಲು ಹುನ್ನಾರ ನಡೆಸಿದ್ದಾರೆ. ಇದು ಯಾವ ಕಾರಣಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.