spot_img
spot_img
spot_img
34.1 C
Belagavi
Monday, May 29, 2023
spot_img

ಅಗಲಿದ ಗಣ್ಯರ ಒಡನಾಟ,ಸಾಧನೆ ಸ್ಮರಿಸಿದ ಸದಸ್ಯರು

ಬೆಳಗಾವಿ : ಅಗಲಿದ ಗಣ್ಯರಿಗೆ ಸುವರ್ಣಸೌಧದದ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಉಭಯಸದನಗಳಲ್ಲಿ ಸಂತಾಪ ಸೂಚಿಸಲಾಯಿತು.

ವಿಧಾನಸಭೆಯ ಹಾಲಿ ಉಪಸಭಾಧ್ಯಕ್ಷರಾಗಿದ್ದ ಆನಂದ ಮಾಮನಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಕಿ, ಲೋಕಸಭೆ ಮಾಜಿ ಸದಸ್ಯ ಕೋಳೂರು ಬಸವನಗೌಡ, ಮಾಜಿ ಸಚಿವರಾಗಿದ್ದ ಜಬ್ಬಾರಖಾನ್ ಹೊನ್ನಳ್ಳಿ,ಸುಧೀಂದ್ರರಾವ್ ಕಸ್ಬೆ ಮತ್ತು ವಿಧಾನಸಭೆಯ ಮಾಜಿ ಸದಸ್ಯರುಗಳಾಗಿದ್ದ ಎನ್.ಟಿ.ಬೊಮ್ಮಣ್ಣ,ಶ್ರೀಶೈಲಪ್ಪ ಬಿದರೂರು, ಕುಂಬ್ಳೆ ಸುಂದರರಾವ್, ಶಂಕರಗೌಡ ಎನ್.ಪಾಟೀಲ್ ಅವರುಗಳು ನಿಧನ ಹೊಂದಿರುವುದಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚನೆ ಮಂಡಿಸಿ ನಿಧನ ಹೊಂದಿದ ಆನಂದ ಮಾಮನಿ ಸೇರಿದಂತೆ ಗಣ್ಯರ ಹೆಸರುಗಳನ್ನು ಪ್ರಸ್ತಾಪಿಸಿ ಅವರ ಜೀವನ,ಸಾಧನೆಗಳನ್ನು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಇದೇ ಸದನದ ಸದಸ್ಯರಾಗಿ ಉಪಸಭಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರು ಸಣ್ಣ ವಯಸ್ಸಿನಲ್ಲಿಯೇ ಸಾರ್ವಜನಿಕ ಜೀವನಕ್ಕೆ ಬಂದು ಅಲ್ಪಕಾಲದಲ್ಲಿಯೇ ಸಾಕಷ್ಟು ಸಾಧನೆ ಮಾಡಿದ್ರು;ಭವ್ಯ ಭವಿಷ್ಯಗಳು ಇವರಿಗೆ ಕಾದಿದ್ದವು;ಆದ್ರೇ ಅನಾರೋಗ್ಯ ಅವರನ್ನು ನಮ್ಮೊಂದಿಗೆ ಇಲ್ಲವಾಗಿಸಿತು ಎಂದರು.

ಅವರ ತಂದೆಯೂ ಸಹ ಇದೇ ಸದನದ ಉಪಸಭಾಧ್ಯಕ್ಷರಾಗಿದ್ದರು;ರೈಲಿನಲ್ಲಿ ಪಯಣ ಸುವಾಗ ತೊಂದರೆಯಾಗಿ ದಾರಿಮಧ್ಯೆಯೇ ತೀರಿಕೊಂಡಿದ್ರು. ಮಾಮನಿ ಮತ್ತು ತಮ್ಮ ಕುಟುಂಬದ ಸಂಬಂಧ ಹಾಗೂ ಒಡನಾಟವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮರಿಸಿದರು.

ಆನಂದ ಮಾಮನಿ ಅವರು ಅವರ ತಂದೆಯಂತೆ ಈ ಭಾಗದಲ್ಲಿ ಜನಪ್ರಿಯ ನಾಯಕರಾಗಿದ್ದರು ಮತ್ತು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ನೀರಾವರಿಯ ಬಗ್ಗೆ ವಿಶೇಷ ಒತ್ತು ನೀಡಿದ್ದ ಅವರು ಪ್ರತಿಯೋಜನೆಗಳ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ರು ಮತ್ತು ಸರಕಾರದ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡಿದ್ದರು;ಓರ್ವ ಮಾದರಿ ಶಾಸಕರು ಇವರಾಗಿದ್ದರು ಎಂದು ಹೇಳಿದ ಸಿಎಂ ಅವರು 2008ರಲ್ಲಿ ನಾವು ಮತ್ತು ಅವರು ಒಂದೇ ಬಾರಿಗೆ ಬಿಜೆಪಿಗೆ ಸೇರ್ಪಡೆಯಾಗಿ ಸತತವಾಗಿ ಮೂರು ಬಾರಿ ಆಯ್ಕೆಯಾಗುತ್ತಾ ಬಂದಿದ್ದಾರೆ ಎಂದರು.

ರಾಮಮನೋಹರ್ ಲೋಹಿಯಾ ಅವರ ತತ್ವಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಮುಲಾಯಂಸಿಂಗ್ ಯಾದವ್ ಅವರು ಐದೂವರೆ ದಶಕ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು; ಕೆಳಜಾತಿಗಳಿಗೆ ನೀಡಿದ ಮಹತ್ವ,ಅಲ್ಪಸಂಖ್ಯಾತರೆಡೆಗೆ ತೋರಿಸಿದ ಕಾಳಜಿಯಿಂದಾಗಿ ರಾಜಕೀಯ ವಲಯದಲ್ಲಿ ನೇತಾಜಿ ಎಂದೇ ಪ್ರಸಿದ್ಧರಾಗಿದ್ದರು.

10 ಬಾರಿ ಉತ್ತರ ಪ್ರದೇಶ ವಿಧಾನಸಭೆಗೆ,1 ಬಾರಿ ವಿಧಾನಪರಿಷತ್,07 ಬಾರಿ ಲೋಕಸಭೆಗೆ ಆಯ್ಕೆಯಾಗಿ, ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿ,ಮೂರು ಬಾರಿ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅದ್ಭುತ ವ್ಯಕ್ತಿತ್ವದ ದೇಶದ ಹಿರಿಯ ರಾಜಕಾರಣ ಮುಲಾಯಂಸಿಂಗ್ ಯಾದವ್ ನಿಧನ ತುಂಬಲಾರದ ನಷ್ಟ ಎಂದರು.

ರಾಜ್ಯಸಭೆ ಮಾಜಿ ಸದಸ್ಯರಾಗಿದ್ದ ಅಬ್ದುಲ್ ಸಮದ್ ಸಿದ್ದಿಕಿ, ಲೋಕಸಭೆ ಮಾಜಿ ಸದಸ್ಯ ಕೋಳೂರು ಬಸವನಗೌಡ, ಮಾಜಿ ಸಚಿವರಾಗಿದ್ದ ಜಬ್ಬಾರಖಾನ್ ಹೊನ್ನಳ್ಳಿ,ಸುಧೀಂದ್ರರಾವ್ ಕಸ್ಬೆ ಮತ್ತು ವಿಧಾನಸಭೆಯ ಮಾಜಿ ಸದಸ್ಯರುಗಳಾಗಿದ್ದ ಎನ್.ಟಿ.ಬೊಮ್ಮಣ್ಣ,ಶ್ರೀಶೈಲಪ್ಪ ಬಿದರೂರು, ಕುಂಬ್ಳೆ ಸುಂದರರಾವ್, ಶಂಕರಗೌಡ ಎನ್.ಪಾಟೀಲ್ ಅವರುಗಳು ನಾಡಿಗೆ ನೀಡಿದ ಕೊಡುಗೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಮರಿಸಿದರು.

ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆನಂದ ಮಾಮನಿ, ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂಸಿಂಗ್ ಯಾದವ ಸೇರಿದಂತೆ ಅಗಲಿದ ಗಣ್ಯರೊಂದಿಗಿನ ಒಡನಾಟವನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಸಚಿವರಾದ ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸದನದ ಸದಸ್ಯರಾದ ಬಂಡೆಪ್ಪ ಕಾಶೆಂಪುರ,ಎಚ್.ಕೆ.ಪಾಟೀಲ್,ಯು.ಟಿ.ಖಾದರ್, ಜಿ.ಸೋಮಶೇಖರರೆಡ್ಡಿ, ವೆಂಕಟರಾವ್ ನಾಡಗೌಡ, ವಿ.ತುಕಾರಾಂ ಸೇರಿದಂತೆ ಅನೇಕರು ಅಗಲಿದ ಗಣ್ಯರ ಕುರಿತು ಮಾತನಾಡಿ ಅವರ ಒಡನಾಟ ಮತ್ತು ಸಾಧನೆಗಳನ್ನು ಸ್ಮರಿಸಿಕೊಂಡರು.

ನಂತರ ಒಂದು ನಿಮಿಷ ಸದನದ ಸದಸ್ಯರು ಎದ್ದುನಿಂತು ಮೌನಾಚರಣೆ ಮಾಡುವುದರ ಮೂಲಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ನಂತರ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನವನ್ನು ಡಿ.20ರ ಬೆಳಗ್ಗೆ 11ಕ್ಕೆ ಮುಂದೂಡಿದರು.

Related News

ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಅಸ್ಸಾಂನ ಗುವಾಹಟಿಗೆ ಹೊರಟಿದೆ. ಈ...

ಮಣಿಪುರದಲ್ಲಿ ಮತ್ತೆ ತಲೆ ಎತ್ತಿದ ಹಿಂಸಾಚಾರ ಪೊಲೀಸ್‌ ಸೇರಿದಂತೆ ಐವರು ಸಾವು

ಇಂಫಾಲ್‌: ಕಳೆದ ಕೆಲವು ದಿನಗಳಿಂದ ಸಹಜ ಸ್ಥಿತಿಗೆ ಮರಳುತ್ತಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾನುವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್‌ ಸೇರಿದಂತೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಕಳೆದ ಒಂದು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -