ಬೆಳಗಾವಿ: ನಾಳೆಯಿಂದ 10 ದಿನಗಳ ಕಾಲ ಸುವರ್ಣಸೌಧದಲ್ಲಿ ನಡೆಯಲಿರುವ 10ನೇ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ನಡೆಯುತ್ತಿದೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲು ಸಂಘಟನೆಗಳು ತಯಾರಿ ನಡೆಸುತ್ತಿದ್ದು, ಪ್ರತಿಭಟನೆಗೆ ಈ ಬಾರಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ನಗರ ಪೊಲೀಸ್ ಆಯುಕ್ತರ ಬಳಿ ಹಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಪ್ರತಿಭಟನಾಕಾರರಿಗೆ ಈಗಾಗಲೇ ಹೋರಾಟಕ್ಕೆ ಪೊಲೀಸ್ ಇಲಾಖೆ ಜಾಗ ನಿಗದಿ ಮಾಡಿದೆ.
ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವುದರಿಂದ ಪೊಲೀಸರು ಪ್ರತಿಭಟನಾಕಾರರಿಗೆ ಪ್ರತಿಭಟನೆ ನಡೆಸಲು ಸ್ಥಳಗಳನ್ನು ನಿಗದಿ ಮಾಡಿದೆ. ಮೀಸಲಾತಿ ಕುರಿತು ವಿವಿಧ ಸಮುದಾಯಗಳಿಂದ ಹೋರಾಟ ನಡೆಯಲಿದ್ದು, ರೈತ ಹೋರಾಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಸಜ್ಜಾಗುತ್ತಿವೆ.
ಡಿಸೆಂಬರ್ 19ರಂದು ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಹೋರಾಟ ನಡೆಸಲಿದ್ದಾರೆ. ಡಿಸೆಂಬರ್ 21ರಂದು ಮಾದಿಗ ದಂಡೋರ ಸಮಿತಿಯಿಂದ ಹೋರಾಟ. ಡಿಸೆಂಬರ್ 22ರಂದು ಪಂಚಮಸಾಲಿ ಸಮಾಜದಿಂದ ಬೃಹತ್ ಹೋರಾಟ ನಡೆಯಲಿದೆ. ಹೋರಾಟಕ್ಕೆ 100 ಎಕರೆ ಪ್ರದೇಶದ ಬೃಹತ್ ಜಾಗ ನಿಗದಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.