ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಸಮರ್ಪಕ ಮುಂದುವರಿಕೆಗಾಗಿ ರಾಜ್ಯದ ಆರು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಖಾತೆಗಳಿಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ 8,844 ಕೋಟಿ ರೂ. ಪಾವತಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ ನೀಡಲಾಗುವ ಶೂನ್ಯ ಬಿಲ್‌ಗಳಿಗೆ ಸರ್ಕಾರದ ವತಿಯಿಂದ ಪಾವತಿಸುತ್ತಿರುವ ಮೊತ್ತ ಇದಾಗಿದೆ.
ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, 1,70,90,681 ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 1.65 ಕೋಟಿ ಕುಟುಂಬಗಳು ಶೂನ್ಯ ಬಿಲ್ ಪಡೆಯುತ್ತವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಯೋಜನೆಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಜುಲೈ ಅಂತ್ಯದವರೆಗಿನ ಬಿಲ್ ಮೊತ್ತವನ್ನು ಕ್ಲಿಯರ್ ಮಾಡಲಾಗಿದೆ. ಈ ತಿಂಗಳಿಗೆ, ಆಗಸ್ಟ್ 10 ಅಥವಾ 15 ರೊಳಗೆ ಅದನ್ನು ಪಾವತಿಸಲಾಗುವುದು. ಆದಾಯ, ಲಾಭ ಮತ್ತು ನಷ್ಟದ ಲೆಕ್ಕಪರಿಶೋಧನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕಟ್ಟುನಿಟ್ಟಾಗಿ ಪರಿಶೀಲಿಸಿರುವುದರಿಂದ ಸರ್ಕಾರವು ಯಾವುದೇ ಬಿಲ್‌ಗಳನ್ನು ಬಾಕಿ ಇರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಆದರೆ ಇದಕ್ಕೆ ಗೃಹ ಜ್ಯೋತಿಯೇ ಕಾರಣ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಆದಾಗ್ಯೂ, ಆದಾಯವು ಗರಿಷ್ಠ ಮಟ್ಟದಲ್ಲಿಲ್ಲದ ಕಾರಣ ಎಸ್ಕಾಮ್‌ಗಳಿಗೆ ರಾಜ್ಯ ಖಜಾನೆಯಿಂದ ಪಾವತಿಸುವ ಬಿಲ್‌ಗಳನ್ನು ಕಡಿಮೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಉಚಿತ ಯೂನಿಟ್ ಮಿತಿಯನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸುವ ಬಗ್ಗೆ ಯಾವುದೇ ಚರ್ಚೆ ಇಲ್ಲ. ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಯೋಜನೆಯನ್ನು ಈಗಾಗಲೇ ತಿರಸ್ಕರಿಸಿದವರಿಗೆ ಭವಿಷ್ಯದಲ್ಲಿ ಅನುಮತಿ ನೀಡದೇ ಇರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.