ಬೆಳಗಾವಿ : ಖಾತೆ ಬದಲಾವಣೆಗಾಗಿ ಲಂಚ ಕೇಳಿದ್ದ ಕಿತ್ತೂರು ತಹಶೀಲ್ದಾರ್, ಗುಮಾಸ್ತರ ನ್ನು ಲಂಚದ ಸಮೇತ ಮೇಲೆ ಲೋಕಾಯುಕ್ತರಿಗೆ ಬಲೆಗೆ ಹಿಡಿದುಕೊಟ್ಟ ಅರ್ಜಿದಾರರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದಲ್ಲಿ ಬಾಪುಸಾಹೇಬ್ ಇನಾಮದಾರ್ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಪುತ್ರ ರಾಜೇಂದ್ರ ಇನಾಮದಾರ್ ದೂರು ನೀಡಿದ್ದರು.
10 ಎಕರೆ ಜಮೀನಿನ ಖಾತಾ ಬದಲಾವಣೆ ಸಂಬಂಧ ಲಂಚ ಕೇಳಿದ್ದ ತಹಶಿಲ್ದಾರ್ ಮೇಲೆ ಅವರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ನಿನ್ನೆ ತಡರಾತ್ರಿ 2 ಲಕ್ಷ ರೂ. ಹಣ ಪಡೆಯುವಾಗ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಗುಮಾಸ್ತ ಪ್ರಸನ್ನ ಜಿ. ಇವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ತಡರಾತ್ರಿ ಕಿತ್ತೂರು ತಾಲ್ಲೂಕಿನಾದ್ಯಂತ ಈ ಸುದ್ದಿ ಹಬ್ಬಿದ್ದು, ಇದರಿಂದ ಆಘಾತಕ್ಕೆ ಒಳಗಾಗಿ ಬಾಪುಸಾಹೇಬ್ ಇನಾಮದಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಕಿತ್ತೂರು ತಹಶೀಲ್ದಾರ್ ಮತ್ತು ಗುಮಾಸ್ತರನ್ನು ಲೋಕಾಯುಕ್ತ ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆದಿದ್ದು, ಬಳಿಕ ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶರ ಮನೆಗೆ ಆರೋಪಿತರನ್ನು ಕರೆದೊಯ್ಯಲಾಗಿದೆ.